ಬೆಳಗಾವಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ಬುದ್ಧಿಮಾಂದ್ಯ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ಎಸಗಿದ್ದರಿಂದ ಮಗು ಜನಿಸಿದ ಪ್ರಕರಣ ತಡವಾಗಿ ಗೊತ್ತಾಗಿದೆ.
ಘಟನೆ 2023ರ ಫೆಬ್ರವರಿಯಲ್ಲಿ ನಡೆದಿದ್ದು, ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಯುವತಿಯ ತಾಯಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಮನೆಯಲ್ಲಿ ತಂದೆ– ಮಗಳು ಮಾತ್ರ ಇರುತ್ತಿದ್ದರು. ಮಗಳು ಗರ್ಭ ಧರಿಸಿದ ಅನುಮಾನ ಬಂದಿದ್ದರಿಂದ ಗ್ರಾಮದ ಕೆಲವರು ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದರು. ಅವರ ಮೂಲಕ ಎನ್ ಜಿಒ ಒಂದರ ತಂಡ ಪರಿಶೀಲನೆ ನಡೆಸಿದಾಗ ಯುವತಿ ಗರ್ಭಿಣಿ ಆಗಿರುವುದು ಖಚಿತವಾಗಿತ್ತು.
ಎನ್ ಜಿಒ ಸದಸ್ಯರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಬುದ್ಧಿಮಾಂದ್ಯೆಗೆ ಜನಿಸಿದ ಮಗು ಹಾಗೂ ಆಕೆಯ ತಂದೆಯ ಡಿಎನ್ ಎ ಅನ್ನು ಆಗಸ್ಟ್ ನಲ್ಲಿ ತಪಾಸಣೆ ಮಾಡಲಾಗಿತ್ತು. ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದರಿಂದ ಮಗು ಜನಿಸಿದೆ ಎಂಬುದು ಖಚಿತವಾಯಿತು.
ಆರೋಪಿಯನ್ನು ಬಂಧಿಸಿ, ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಕೂಡ ಸಲ್ಲಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ ತಿಳಿಸಿದ್ದಾರೆ.