ರಾಮನಗರ: ಯುವ ಪೀಳಿಗೆ ಹೆಚ್.ಐ.ವಿ -ಏಡ್ಸ್ ನಿಯಂತ್ರಿಸಲು ಜಾಗೃತರಾಗಬೇಕಿದೆ ಹೆಚ್.ಐ.ವಿ ಸೋಂಕನ್ನು ಸೊನ್ನೆಗೆ ತರುವುದು, ಕಳಂಕ ತಾರತಮ್ಯ ತಡೆಗಟ್ಟುವುದು ಹಾಗೂ ಅವರೊಂದಿಗೆ ಬದುಕುತ್ತಿರುವವರಿಗೆ ಬೆಂಬಲ ಚಿಕಿತ್ಸೆ ನೀಡುವುದಾಗಿದೆ. ಹೆಚ್.ಐ.ವಿ ಜೀವನಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಹಾಗೂ ವಿಶ್ವದಲ್ಲಿ ಇತರೆಡೆ ಆಗುತ್ತಿರುವ ಆಗೂ-ಹೋಗುಗಳ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷರಾದ ವಿಜಯ ಕುಮಾರಿ ಅವರು ತಿಳಿಸಿದರು.
ಅವರು ಇಂದು ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ, ವಿವಿಧ ಅಭಿವೃದ್ದಿ ಇಲಾಖೆಗಳು ಹಾಗೂ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏಡ್ಸ್ ನಿಯಂತ್ರಣ ಕುರಿತು ಆಯೋಜಿಸಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಚ್.ಐ.ವಿ / ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಅನೇಕ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಲು ನಿರಂತರವಾದ ಅರಿವು ಮೂಡಿಸುವ ಅಗತ್ಯವಿದೆ. ಹೆಚ್.ಐ.ವಿ / ಏಡ್ಸ್ ಸೋಂಕಿತರಿಗೆ ವಿವಿಧ ಇಲಾಖೆಗಳಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೆಚ್.ಐ.ವಿ / ಏಡ್ಸ್ ಸೋಂಕಿತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲಾ ಡ್ಯಾಪ್ಕೋ ಅಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಹೆಚ್.ಐ.ವಿ / ಏಡ್ಸ್ ಒಂದು ರೀತಿಯ ವೈರಸ್, ಅದು ದೇಹವನ್ನು ಪ್ರವೇಶಿಸಿದಾಗ ಅದನ್ನು ಹೆಚ್.ಐ.ವಿ / ಏಡ್ಸ್ ಸೋಂಕು ಎಂದು ಕರೆಯಲಾಗುತ್ತದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡದಿದ್ದರೆ ಅಥವಾ ಚಿಕಿತ್ಸೆಯನ್ನು ಪ್ರಾರಂಭಿಸದಿದ್ದರೆ, ರೋಗವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಹೆಚ್.ಐ.ವಿ / ಏಡ್ಸ್ ಸೋಂಕಿತರು ಸೂಕ್ತ ಚಿಕಿತ್ಸೆಯನ್ನು ಪಡೆಯುವಂತೆ ತಿಳಿಸಿದರು.
ಯುವ ಪೀಳಿಗೆಯವರು ಹೆಚ್.ಐ.ವಿ / ಏಡ್ಸ್ ಕುರಿತು ಜಾಗೃತರಾಗಬೇಕು. ವಿದ್ಯಾರ್ಥಿಗಳು ಹೆಚ್.ಐ.ವಿ / ಏಡ್ಸ್ ಕುರಿತು ತಮ್ಮ ಅಕ್ಕಪಕ್ಕದವರಿಗೆ ಜಾಗೃತಿ ಮೂಡಿಸಬೇಕು. ಹೆಚ್.ಐ.ವಿ / ಏಡ್ಸ್ ಸೋಂಕಿತರಿಗೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್.ಐ.ವಿ ಸೋಂಕಿತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಹೆಚ್.ಐ.ವಿ/ ಏಡ್ಸ್ ಕುರಿತು ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನ್ಯಾ. ಅನಿತಾ ಎನ್.ಪಿ. ಅವರು ಈ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷರಾದ ಸೋಮಶೇಖರ್ (ಮಣಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಆರ್.ಸಿ.ಎಚ್. ಅಧಿಕಾರಿ ಡಾ. ರಾಜು, ಡಿ.ಎಲ್.ಒ ಡಾ. ಮಂಜುನಾಥ್, ಆರೋಗ್ಯ ಸಿಬ್ಬಂದಿಗಳು, ಎನ್.ಜಿ.ಒ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.