ರಾಮನಗರ: ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜನ ಸಂಖ್ಯೆ ಹೆಚ್ಚಳದಿಂದ ಉಂಟಾಗುವ ಅನೇಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು ನಾವೆಲ್ಲರೂ ಜಾಗೃತರಾಗಿ ಜನಸಂಖ್ಯೆ ನಿಯಂತ್ರಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಿ ಸಮೃದ್ಧಿಯ ಜೀವನ ನಡೆಸಲು ಪ್ರತಿಜ್ಞೆ ಮಾಡಬೇಕಿದೆ ಎಂದು ಪುರಸಭೆ ಸದಸ್ಯರಾದ ಹೆಚ್.ಜೆ. ಪುರುಷೋತ್ತಮ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಮನಗರ, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮಾಗಡಿ, ವಿವಿಧ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾಗಡಿ ಟೌನಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ / ಅಭಿಯಾನ -2023 ರ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಅವರು ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡುತ್ತಾ 1952 ರಲ್ಲಿ ಕುಟುಂಬ ಯೋಜನೆ ರಾಷ್ಟ್ರೀಯ ಕಾರ್ಯಕ್ರಮವನ್ನು ಆರಂಭಿಸಿದ ವಿಶ್ವದ ಮೊದಲ ದೇಶ ಭಾರತವಾಗಿದೆ. ವಿಶ್ವ ಈಗಾಗಲೇ ತೀವ್ರಗತಿಯ ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜನಸಂಖ್ಯೆ ಹೀಗೆ ಸ್ಪೋಟಗೊಳ್ಳುತ್ತಿದ್ದರೆ ಭವಿಷ್ಯದಲ್ಲಿ ಇನ್ನೂ ಜಟಿಲವಾದ ಸಮಸ್ಯೆಗಳು ಉಲ್ಬಣಗೊಳ್ಳುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಜಾತಿ, ಧರ್ಮ, ರೂಢಿ, ಸಂಪ್ರಾದಾಯದಂತಹ ಅವೈಜ್ಞಾನಿಕ ಆಚರಣೆಗಳನ್ನು ತೊಲಗಿಸಿ, ವೈಜ್ಞಾನಿಕ ಮತ್ತು ವಾಸ್ತವಿಕ ಸಂಗತಿಗಳನ್ನು ಅರಿತುಕೊಂಡು ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡುವ ಮೂಲಕ ಜನ ಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಅವರು ಮಾತನಾಡಿ, ಅಂತರದ ಹೆರಿಗೆ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆ, ಶಾಶ್ವತ ಸಂತಾನ ಹರಣ ಶಸ್ತ್ರಚಿಕಿತ್ಸೆ, ಪುರುಷರಿಗಾಗಿ ನೋಸ್ಕಾಲ್ ಪೆಲ್ ವ್ಯಾಸಕ್ಷಮಿಯಂತಹ ಸುಧಾರಿತ ಮತ್ತು ಗುಣಾತ್ಮಕ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಪಡೆಯುವ ಮೂಲಕ, ಪ್ರತಿ ಕುಟುಂಬವೂ 1-2 ಮಕ್ಕಳಿಗೆ ಸೀಮಿತವಾಗಬೇಕು. ಈ ಎಲ್ಲಾ ಸೇವಾ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ದೊರೆಯುತ್ತದೆ, ಮತ್ತು ಇದರೊಂದಿಗೆ ಕೆಲವು ಆರ್ಥಿಕ ಸೌಲಭ್ಯಗಳನ್ನೂ ಸರ್ಕಾರ ನೀಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಸಂಖ್ಯೆ ನಿಯಂತ್ರಿಸಲು ಸಹಕರಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಥಶಾಸ್ತ್ರಜ್ಞರಾದ ಭವಾನಿ, ಪ್ರಾಂಶುಪಾಲ ರಾಜಣ್ಣ, ಟಿ.ಹೆಚ್.ಒ ಡಾ. ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತುಕಾರಾಮ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಮಂಗಲ, ಲೀನಾಕುಮಾರಿ, ಉಪನ್ಯಾಸಕರು, ಆರೋಗ್ಯ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು.