ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ರಿಜಿಸ್ಟ್ರಾರ್ ಹುದ್ದೆಗೆ ಕೆಎಎಸ್ ಅಧಿಕಾರಿ ಎಸ್. ಕುಸುಮಾ ಕುಮಾರಿ ಅವರನ್ನು ನೇಮಕಗೊಳಿಸಿ ಶನಿವಾರವೇ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಅದೇ ಆದೇಶವನ್ನು ಸೋಮವಾರ ಅಚಾನಕ್ ಹಿಂಪಡೆದು ಹೊಸ ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಅಧಿಕಾರ ಸ್ವೀಕರಿಸಲು ಸಕಲ ಸಿದ್ಧತೆ ನಡೆಸಿದ್ದ ಕುಸುಮಾ ಕುಮಾರಿ ಅವರಿಗೆ ಕೊನೆಯ ಕ್ಷಣದಲ್ಲಿ ಆಘಾತ ಎದುರಾಗಿದೆ. ಸರ್ಕಾರದ ಈ ಹಠಾತ್ ಯು-ಟರ್ನ್ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ನಿರ್ಧಾರದ ಹಿಂದೆ ಯಾವ ಒತ್ತಡ ಕಾರ್ಯನಿರ್ವಹಿಸಿದೆ? ರಾಜಕೀಯ ಅಥವಾ ಆಡಳಿತಾತ್ಮಕ ಹಸ್ತಕ್ಷೇಪವೇ ಕಾರಣವೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಧಿಕಾರಿಗಳ ವಲಯದಲ್ಲಿಯೂ ಚರ್ಚೆಗಳು ಜೋರಾಗಿವೆ.
ಸರ್ಕಾರದಿಂದ ಯಾವುದೇ ಸ್ಪಷ್ಟನೆ ಹೊರಬಾರದ ಹಿನ್ನೆಲೆಯಲ್ಲಿ, ಈ ನಿರ್ಧಾರ ನಿಗೂಢತೆಯನ್ನು ಮತ್ತಷ್ಟು ಗಾಢಗೊಳಿಸಿದೆ. KSOU ಆಡಳಿತದಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.



