ಬೆಂಗಳೂರು : ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಮತ್ತೊಮ್ಮೆ ವಿವಾದದಕ್ಕೆ ಸಿಲುಕಿದ್ದು, ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ಗೋವು ರಕ್ಷಕರ ಸೇನೆ ಪರ ಸುಮನ್ ಅವರು ನೀಡಿರುವ ದೂರಿನಲ್ಲಿ, ಆರ್ಯವರ್ಧನ್ ಗುರೂಜಿ ಅವರ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಿದ್ದು, ಮಹಿಳೆಯರ ಗೌರವಕ್ಕೂ ಅವಮಾನವಾಗುವಂತಿದೆ ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ಇನ್ನೂ ಇತ್ತೀಚೆಗೆ ವೈರಲ್ ಆಗಿರುವ ಸಂದರ್ಶನದ ವಿಡಿಯೊದಲ್ಲಿ, ಆರ್ಯವರ್ಧನ್ ಗುರೂಜಿ ಲಕ್ಷ್ಮೀ ದೇವಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಅವರು ಮಾನವ ದೇಹದ ಒಂದು ಅಂಗವನ್ನು ಉಲ್ಲೇಖಿಸಿ ಪೂಜೆ ಮಾಡಬೇಕು ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ದೂರು ಸ್ವೀಕರಿಸಿರುವ ಶಂಕರಪುರಂ ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ಆರಂಭಿಸಿದ್ದು, ಆರ್ಯವರ್ಧನ್ ಗುರೂಜಿಗೆ ವಿಚಾರಣೆಗೆ ಹಾಜರಾಗುವಂತೆ ಮೌಖಿಕ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಹೊರಬಂದಿಲ್ಲ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.



