Friday, April 11, 2025
Google search engine

Homeರಾಜ್ಯಒಳ ಮೀಸಲಾತಿ ಏಕ ಸದಸ್ಯ ಆಯೋಗಕ್ಕೆ ಸಂಚಾಲಕರು, ಕಾರ್ಯದರ್ಶಿ ನೇಮಕ

ಒಳ ಮೀಸಲಾತಿ ಏಕ ಸದಸ್ಯ ಆಯೋಗಕ್ಕೆ ಸಂಚಾಲಕರು, ಕಾರ್ಯದರ್ಶಿ ನೇಮಕ

ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನು ಸಂಚಾಲಕರನ್ನಾಗಿ ಹಾಗೂ ಇಂದಿರಾಗಾಂಧಿ ವೃತ್ತಿ ತರಬೇತಿ ಕೇಂದ್ರದ ಅಪರ ನಿರ್ದೇಶಕಿಯನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ವಿಚಾರಣಾ ಆಯೋಗವು ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು ೨೦೧೧ರ ಜನಗಣತಿಯನ್ನು ಪರಿಗಣಿಸಿ, ವೈಜ್ಞಾನಿಕವಾಗಿ ತರ್ಕಬದ್ಧ ಒಳ ಮೀಸಲಾತಿ ಮತ್ತು ಪರಿಶಿಷ್ಟ ಜಾತಿಗಳಲ್ಲಿ ಸಮಾನ ಜಾತೀಯ ಉಪ-ಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದ ಸಾರ್ವಜನಿಕ ಸೇವೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಳಲ್ಲಿ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳಲ್ಲಿ ಅಂತರ್ ಹಿಂದುಳಿದಿರುವಿಕೆಯನ್ನು ಗುರುತಿಸಲು ಸೂಕ್ತ ದತ್ತಾಂಶಗಳನ್ನು ಸಂಗ್ರಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಜಾತಿಗಳು ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದು, ೨೦೧೧ರ ಜನಗಣತಿಯಲ್ಲಿ ಈ ಜಾತಿಗಳ ಜನಸಂಖ್ಯೆಯ ವಿವರ ಇರುತ್ತದೆ. ಆದರೆ, ಈ ಜಾತಿಗಳಲ್ಲಿನ ಉಪ ಜಾತಿಗಳ ಜನಸಂಖ್ಯೆಯ ವಿವರಗಳು ಇರುವುದಿಲ್ಲ. ಆದ್ದರಿಂದ ಈ ಮೂರೂ ಜಾತಿಗಳ ಉಪಜಾತಿಗಳ ಜನಸಂಖ್ಯೆಯ ದತ್ತಾಂಶವನ್ನು ಸಂಗ್ರಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ವಿಚಾರಣಾ ಆಯೋಗವು ಮೀಸಲಾತಿ ನೀತಿಗಳ ಪ್ರಯೋಜನವನ್ನು ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳ ನಡುವೆ ಸಮಾನವಾಗಿ ಪಡೆಯಲಾಗುತ್ತಿದೆಯೇ ಎಂಬುವರ ಬಗ್ಗೆ ಪರಿಶೀಲಿಸಬೇಕು. ಎಲ್ಲ ಅಂಶಗಳ ಬಗ್ಗೆ ಕೈಗೊಳ್ಳಬಹುದಾದ ಇತರ ಕ್ರಮಗಳ ಕುರಿತು ನಿರ್ಧಿಷ್ಟ ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಯೋಗವು ವಿಚಾರಣೆಯನ್ನು ಕೈಗೊಳ್ಳಲು ಅನುಕೂಲವಾಗುವಂತೆ ಕಚೇರಿ ವ್ಯವಸ್ಥೆ, ವಾಹನ, ಸಿಬ್ಬಂದಿ ಮತ್ತು ಇತರೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಕಲ್ಪಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಒಳ ಮೀಸಲಾತಿಗೆ ಸಂಬಂಧಪಟ್ಟ ಎಲ್ಲ ಸರಕಾರಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಮತ್ತು ಪುರಾವೆಗಳನ್ನು ವಿಚಾರಣಾ ಆಯೋಗಕ್ಕೆ ಸಲ್ಲಿಸಬೇಕು ಮತ್ತು ಆಯೋಗಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular