ಗುಂಡ್ಲುಪೇಟೆ: ನೆರೆಯ ಕೇರಳದಲ್ಲಿ ಕೊರೊನಾ ರೂಪಾಂತರಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿಯಂಚಿನ ಗ್ರಾಮಗಳಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಜನರಿಗೆ ಪ್ರತಿ ಮನೆ ಮನೆಗೂ ತೆರಳಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಯಿತು.
ತಾಲೂಕಿನ ಮದ್ದೂರಿನ ವಾಲ್ಮೀಕಿ ಆಶ್ರಮ ಸೇರಿದಂತೆ ಹಲವು ಗಡಿ ಗ್ರಾಮಗಳಿಗೆ ಆರೋಗ್ಯಾಧಿಕಾರಿ ಸ್ವಾಮಿ ನೇತೃತ್ವದ ತಂಡ ಭೇಟಿ ನೀಡಿ ಗ್ರಾಮದ ಜನರಿಗೆ ಕೋವಿಡ್ ಬಗ್ಗೆ ಆತಂಕ ಬೇಡ ಮುನ್ನೆಚ್ಚರಿಕೆ ವಹಿಸಬೇಕು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೊರೋನಾ ವೈರಸ್ ಬೇಗ ತಲುಗಲಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಹಾಗಾಗಿ ೬೦ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡರು.
ಶಬರಿಮಲೆ ಯಾತ್ರಾರ್ಥಿಗಳು ಮತ್ತು ಕೆಲಸಕ್ಕೆ ಕೇರಳಕ್ಕೆ ತೆರಳಿರುವ ಕೂಲಿ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂದಿರುಗುವ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಬೇಕು. ವರದಿ ಬರುವವರೆಗೆ ಸೋಂಕಿತರ ಜೊತೆ ಯಾವುದೇ ರೀತಿಯ ಸಂಪರ್ಕ ಇಟ್ಟುಕೊಳ್ಳದೆ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಮದಲ್ಲಿ ಒಬ್ಬರಿಗೆ ಕೋವಿಡ್ ಧೃಡಪಟ್ಟರೆ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡುವ ಪರಿಸ್ಥಿತಿ ಬರಬಹುದು. ಹಾಗಾಗಿ ಜ್ವರ, ಶೀತ ಮತ್ತು ನೆಗಡಿ ಕಂಡು ಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.