ಮಂಡ್ಯ: ಭ್ರಷ್ಟಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆಯಿದ್ದ ಹಾಗೆ ಒಂದು ವೇಳೆ ಕ್ಯಾನ್ಸರ್ ಕಾಯಿಲೆ ಹೊಂದಿರುವವರನ್ನು ಗುಣಪಡಿಸಬಹುದು ಭ್ರಷ್ಟಾಚಾರ ಎಂಬ ಕಾಯಿಲೆ ಹೊಂದಿರುವವರನ್ನು ಗುಣ ಪಡಿಸಲಾಗುವುದಿಲ್ಲ ಅಧಿಕಾರಿಗಳು ಭ್ರಷ್ಟಚಾರ ಎಂಬ ಕಾಯಿಲೆಯಿಂದ ದೂರವಿರಿ ಇಲ್ಲವಾದರೆ ಭಯದಲ್ಲಿ ಬದುಕುವ ಪರಿಸ್ಥಿತಿ ಬರಬಹದು ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅವರು ಇಂದು ನಗರದ ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರದ ಹಾದಿಯಲ್ಲಿ ಸಾಗಿದರೆ ದೇಶದ ಅಭಿವೃದ್ಧಿಗೆ ಕಂಟಕವಾಗುತ್ತದೆ. ಸಮಾಜದಲ್ಲಿ ಸಮಾನತೆಗೆ ಶ್ರಮಿಸಿದ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಇನ್ನಿತರೆ ಗಣ್ಯರನ್ನು ಅಗೌರವಿಸಿದಂತೆ. ಕುವೆಂಪು ಅವರ ಎಲ್ಲಾದರೂ ಇರು ಎಂತಾದರು ಇರು ಎಂದೆAದಿಗೂ ನೀ ಕನ್ನಡವಾಗಿರು ಎಂಬ ನುಡಿಯಂತೆ ಅಧಿಕಾರಿಗಳು ಎಲ್ಲಾದರೂ ಇರು ಎಂತಾದರು ಇರು ಎಂದೆAದಿಗೂ ಭ್ರಷ್ಟಾಚಾರ ವಿರೋಧಿಯಾಗಿರು ಎಂಬ ದ್ಯೇಯ ವಾಕ್ಯವನ್ನು ಅಳವಡಿಸಿಕೊಳ್ಳ ಬೇಕಾಗಿದೆ ಎಂದರು.
ರಾಜ್ಯದ ಪ್ರತಿಯೊಬ್ಬ ಪ್ರಜೆಯು ಅನ್ಯಾಯದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಹಾಗೂ ದೂರಡಳಿತದ ವಿರುದ್ಧ ಲೋಕಾಯುಕ್ತ ಕಚೇರಿಗೆ ತಲುಪಿ ದೂರು ನೀಡುವ ಅಧಿಕಾರವನ್ನು ಹೊಂದಿದ್ದಾರೆ. ಯಾರಿಗೂ ಹೆದರದೆ ದೈರ್ಯವಾಗಿ ನಿಮ್ಮ ದೂರುಗಳನ್ನು ಯಾವ ಸಮಯದಲ್ಲಾದರೂ, ಯಾವ ಸಂದರ್ಭದಲ್ಲಾದರೂ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಸಲ್ಲಿಸಿ ಎಂದು ಸಾರ್ವಜನಿಕರಿಗೆ ತಿಳಿಸಿದರು.
ನಮ್ಮ ಭಾರತ ದೇಶ ಎಲ್ಲಾ ಧರ್ಮದವರನ್ನು ಹೊಂದಿರುವ ದೇಶವಾಗಿದ್ದು ಪ್ರತಿಯೊಂದು ಧರ್ಮದವರಿಗೂ ಸಮಾನತೆಯನ್ನು ನೀಡಿದೆ. ಸಮಾನತೆಯನ್ನು ಬಳಸಿಕೊಂಡು ಅನ್ಯಾಯದ ವಿರುದ್ಧ ದ್ವನಿ ಎತ್ತಿ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಆತ್ಮಸ್ಟೈರ್ಯದ ಮಾತುಗಳನ್ನು ಹೇಳಿದರು.
ಅಧಿಕಾರಿಗಳು ಕರ್ತವ್ಯ ನಿಭಾಯಿಸದೆಯಿದ್ದಲ್ಲಿ ಅನರ್ಹ ಎಂದು ಅಮಾನತ್ತು ಮಾಡಬಹುದು. ಅಧಿಕಾರಿಗಳ ವಿರುದ್ಧ ದೂರು ಬಂದಲ್ಲಿ ನೋಟಿಸ್ ಕಳುಹಿಸಲಾಗುವುದು ಹಾಗೂ ಒಂದು ತಿಂಗಳಿನ ಗಡುವು ನಂತರವು ಕೆಲಸ ನಿರ್ವಹಿಸದೆ ಇದ್ದಲ್ಲಿ ಕರ್ತವ್ಯಲೋಪ ಎಂದು 6 ತಿಂಗಳು ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಅಧಿಕಾರಿಗಳ ವಿರುದ್ಧ ಸುಳ್ಳು ದೂರು ಬಂದಲ್ಲಿ ಸುಳ್ಳು ದೂರು ನೀಡಿದವರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು. ಸುಳ್ಳು ದೂರು ನೀಡಿದವರನ್ನು ದೈರ್ಯವಾಗಿ ಎದುರಿಸಲು ಆತ್ಮಸಾಕ್ಷಿಯಿಂದ ಅಧಿಕಾರಿಗಳು ಕೆಲಸ ನಿರ್ವಹಿಸಿ ಎಂದರು.
ಸಂವಿಧಾನೋ ರಕ್ಷತಿ ರಕ್ಷಿತಃ ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿರಲಿಲ್ಲ ಆದರೆ, ಇಂದು ದೇಶದಲ್ಲಿ ಶೇಕಡಾ ನೂರಕ್ಕೆ 80 ರಷ್ಟು ಜನ ವಿದ್ಯಾವಂತರಾಗಿರುತ್ತಾರೆ. ಆದರೆ ಅವರಲ್ಲಿ ಎಷ್ಟು ಜನರಿಗೆ ಸಂವಿಧಾನ ತಿಳಿದಿದೆ ಎಂಬ ಪ್ರಶ್ನೆ ಉದ್ಭವಿಸಿದಾಗ ದೊರಯುವ ಉತ್ತರ ಕಡಿಮೆ. ದೇಶವು ಸಂವಿದಾನವನ್ನು ಅರಿತುಕೊಳ್ಳಬೇಕಾಗಿದೆ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಸಂವಿಧಾನೋ ರಕ್ಷತಿ ರಕ್ಷಿತಃ ಎಂದು ಹೇಳಿದರು.
ದೇಶದಲ್ಲಿ ಯೋಧರು ಒಂದು ಕ್ಷಣವು ಚಿಂತಿಸದೆ ದೇಶಕ್ಕಾಗಿ ಪ್ರಾಣವನ್ನೇ ತೊರೆದು ಬಿಡುತ್ತಾರೆ. ನಾವು ಅವರಂತೆ ಜೀವಿಸಲು ಅಸಾಧ್ಯವಾದರೂ ಕನಿಷ್ಠ ಪಕ್ಷ ಭ್ರಷ್ಟಾಚಾರವನ್ನಾದರೂ ವಿರೋಧಿಸಿ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡೋಣ ಎಂದರು.
ಸಂವಿಧಾನದ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯವನ್ನು ಸಹ ಪಾಲಿಸಬೇಕು. ಹಕ್ಕುಗಳು ದೊರೆಯದೆಯಿದ್ದಲ್ಲಿ ಹೇಗೆ ಪ್ರಶ್ನಿಸುತ್ತಿರಿ ಹಾಗೆಯೇ ನಿಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಹೇಳಿದರು.
ಮಂಡ್ಯ ಮಾದರಿ ಜಿಲ್ಲೆ ಆಗಬೇಕು: ಜಿಲ್ಲೆಯಲ್ಲಿ 2 ದಿನಗಳಿಂದ ಅನೇಕ ತಾಲ್ಲೂಕು, ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿ, ವಿವಿಧ ಸ್ಥಳಗಳನ್ನು ಭೇಟಿ ನೀಡಿ ಪರಿಶೀಲಿಸಲಾಯಿತು. ಅದರಲ್ಲಿ ವೆಲ್ಲೆಸ್ಲಿ ಬ್ರಿಡ್ಜ್ ಬಳಿ ಸೇವೆಜ್ ನೀರು ಸೇರಿ ನದಿಯ ನೀರು ಕಲುಷಿತವಾಗುತ್ತಿರುವುದು ಕಂಡುಬAದಿದ್ದು, ಸಮಸ್ಯೆಯನ್ನು ಕೂಡಲೇ ಜಿಲ್ಲಾಡಳಿತ ಸರಿಪಡಿಸಿರುವ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಸರಿಯಾಗಿ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿಲ್ಲ ಎಂಬುದೇ ವಿಪರ್ಯಾಸವಾಗಿದ್ದು, ಪ್ರತಿಯೊಬ್ಬ ಪಂಚಾಯಿತಿ ಅಧಿಕಾರಿಗಳು ವಿದ್ಯುತ್ ದೀಪ, ಒಳ ಚರಂಡಿ ಹಾಗೂ ಕಸ ವಿಲೇವಾರಿ ಮಾಡಿಸುವ ವ್ಯವಸ್ಥೆಗಳನ್ನು ಉತ್ತಮಗೊಳಿಸಬೇಕು ಹಾಗೂ ಪ್ರತಿ ಪಂಚಾಯಿತಿಗಳಲ್ಲಿ ಪ್ರತ್ಯೇಕ ಇಂಗುಗುAಡಿಗಳನ್ನು ತೆರೆಯಬೇಕು ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯು ಬಗೆಹರೆಯದ ಸಮಸ್ಯೆಗಳನೆಲ್ಲ ಸರಿ ಪಡಿಸಿಕೊಂಡು ರಾಜ್ಯಕ್ಕೆ ಮಾದರಿ ಜಿಲ್ಲೆ ಆಗುವಂತೆ ಕೆಲಸ ನಿರ್ವಹಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತದ ಅಪರ ನಿಬಂಧಕರಾದ ಶ್ರೀನಿವಾಸ್, ಅರವಿಂದ, ಮಿಲನ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ, ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸುರೇಶ್ ಬಾಬು, ಹಾಗೂ ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದ ಮೂರ್ತಿ ಉಪಸ್ಥಿತರಿದ್ದರು