Friday, April 18, 2025
Google search engine

Homeಅಪರಾಧಭ್ರಷ್ಟಾಚಾರ ಸಾಬೀತು : ಡಿ.ಕೆ.ರವಿಗೆ ೧ ವರ್ಷ ಜೈಲು ೨೫ ಸಾವಿರ ದಂಡ

ಭ್ರಷ್ಟಾಚಾರ ಸಾಬೀತು : ಡಿ.ಕೆ.ರವಿಗೆ ೧ ವರ್ಷ ಜೈಲು ೨೫ ಸಾವಿರ ದಂಡ

ಮೈಸೂರು : ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಮೈಸೂರು ಅಬಕಾರಿ ಇಲಾಖೆ ಕಚೇರಿ ಪ್ರಥಮ ದರ್ಜೆ ಸಹಾಯಕ ಡಿ.ಕೆ.ರವಿ ಅವರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ೨೫ ಸಾವಿರ ರೂ. ದಂಡ ವಿಧಿಸಿ ಮೈಸೂರಿನ ೩ನೇ ಅಪರ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

೨೦೧೩-೧೪ನೇ ಸಾಲಿನ ಅಬಕಾರಿ ಲೈಸೆನ್ಸ್ ನವೀಕರಣಕ್ಕೆ ಉಪ-ಆಯುಕ್ತರು, ಅಬಕಾರಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಅಂದಿನ ಮೈಸೂರು ಲೋಕಾಯುಕ್ತ ಎಸ್ಪಿ ಮ್ಯಾಥ್ಯೂಸ್ ಥಾಮಸ್ ಅವರು ಅಬಕಾರಿ ಕಚೇರಿ ಮೇಲೆ ದಾಳಿ ನಡಸಿದ್ದರು. ಈ ವೇಳೆ ಪ್ರಥಮ ದರ್ಜೆ ಸಹಾಯಕ ಡಿ.ಕೆ.ರವಿ ಅವರ ಬಳಿ ಅನಧಿಕೃತವಾಗಿ ೪೦ ಸಾವಿರ ರೂ. ಹಣ ಪತ್ತೆಯಾಗಿತ್ತು. ಈ ವೇಳೆ ವಿಚಾರಣೆ ನಡೆಸಿದಾಗ ನನ್ನ ವೈಯಕ್ತಿಕ ಹಣ ಎಂದು ಹೇಳಿದ್ದರು. ಆದರೆ ಕಛೇರಿ ನಗದು ಘೋಷಣಾ ವಹಿಯಲ್ಲಿ ಹಣದ ಬಗ್ಗೆ ನಮೂದಿಸದೇ ಇರುವುದರಿಂದ ಮತ್ತು ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸರಿಯಾದ ಸಮಜಾಯಿಷಿ ನೀಡದೇ ಇರುವುದರಿಂದ ಹಣವನ್ನು ವಶಕ್ಕೆ ಪಡೆದುಕೊಂಡು ಆರೋಪಿ ಡಿ.ಕೆ.ರವಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣಕ್ಕೆ ಸಂಬಂಧ ಪಟ್ಟಂತೆ ೧೩.೧೦.೨೦೧೫ ರಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ೨೦೨೦ ರಲ್ಲಿ ವಿಚಾರಣೆಯಲ್ಲಿತ್ತು. ವಿಚಾರಣೆಯನ್ನು ಕೈಗೆತ್ತಿಕೊಂಡ ೩ನೇ ಅಪರ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕೆ.ಭಾಗ್ಯ ವಾದಾ-ವಿವಾದಗಳನ್ನು ಪರಿಶೀಲಿಸಿ ಆರೋಪ ಸಾಬೀತಾಗಿರುವುದರಿಂದ ಜನವರಿ ೩೧ ರಂದು ಆರೋಪಿಗೆ ೧ ವರ್ಷ ಕಾರಾಗೃಹ ವಾಸ ಮತ್ತು ೨೫ ಸಾವಿರ ರೂ. ದಂಡ ಹಾಗೂ ದಂಡವನ್ನು ಕಟ್ಟದೇ ಇದ್ದಲ್ಲಿ ೬ ತಿಂಗಳ ಸಾದಾ ಶಿಕ್ಷೆಯನ್ನು ಕಲಂ;೧೩(೧)(ಎ) ಮತ್ತು ೧೩(೨) ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ೧೯೯೮ ರ ರೀತ್ಯಾ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಕಲಿಯಂಡ ಮುತ್ತಮ್ಮ ಪೂಣಚ್ಚ ಅವರು ಲೋಕಾಯುಕ್ತದ ಪರ ವಾದ ಮಂಡಿಸಿದ್ದಾರೆ ಎಂದು ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular