ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿ ದಟದಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹನುಮಾನ್ ಮಾಲೆಧಾರಿಗಳ ಸಂಕೀರ್ಣ ಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಬೆಳಿಗ್ಗೆ 11 ಗಂಟೆಗೆ ಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯದಿಂದ ಸಂಕೀರ್ತನಾ ಯಾತ್ರೆ ಆರಂಭವಾಗಲಿದೆ.
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ.ಗಂಜಾಂ ಮುಖ್ಯ ರಸ್ತೆ , ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಪೇಟೆ ಬೀದಿ ಮಾರ್ಗವಾಗಿ ಶ್ರೀರಂಗನಾಥ ಸ್ವಾಮಿ ದೇವಾಲಯದವರಿಗೆ ಯಾತ್ರೆ ಸಾಗಲಿದ್ದು, ಬಳಿಕ ಹನುಮಾನ್ ಮಾಲೆಯನ್ನು ವಿಸರ್ಜಿಸಲಾಗುತ್ತದೆ. ಹೊರ ಜಿಲ್ಲೆ, ರಾಜ್ಯಗಳಿಂದಲೂ ಹನುಮ ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಯುವಕರು ಬೈಕ್ ರ್ಯಾಲಿ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು ,ಇಬ್ಬರು ಎಸ್ಪಿಗಳ ನೇತೃತ್ವದಲ್ಲಿ 2000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ .

ಸಂಕೀರ್ತನ ಯಾತ್ರೆ ಹಿನ್ನೆಲೆ ವಿವಾದಿತ ಜಾಮೀಯಾ ಮಸೀದಿ ಹಾಗೂ ಟಿಪ್ಪುವಿನ ಬೇಸಿಗೆ ಅರಮನೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಮಸೀದಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಬ್ಯಾರಿಕೇಡ್ ಅಳವಡಿಸಿ ಯಾರು ಮಸೀದಿಯತ್ತ ನುಸುಳದಂತೆ ಭದ್ರತೆ ಒದಗಿಸಲಾಗಿದ್ದು, ಯಾತ್ರೆ ಮುಗಿದ ನಂತರ ನಾಳೆ ಪ್ರವಾಸಿಗರಿಗೆ ಭೇಟಿಗೆ ಅವಕಾಶವಿದೆ.