ಮಂಡ್ಯ: ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದು, ಇತ್ತ ಮಂಡ್ಯದಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಮಂಡ್ಯದ ಲೇಬರ್ ಕಾಲೋನಿಯಲ್ಲಿ ನೂತನವಾಗಿ ರಾಮಮಂದಿರ ನಿರ್ಮಾಣಗೊಂಡಿದ್ದು, ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್ ಲೇಬರ್ ಕಾಲೋನಿ ರಾಮನ ವಿಗ್ರಹ ಕೆತ್ತನೆ ಮಾಡಿದ್ದಾರೆ.
ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮ, ಸರಸ್ವತಿ, ಗಣಪತಿ ವಿಗ್ರಹ ಕೆತ್ತನೆ ಮಾಡಿದ್ದಾರೆ. ಬೆಳಿಗ್ಗೆ 10.30ಕ್ಕೆ ಸಲ್ಲುವ ಮೀನ ಲಗ್ನದಲ್ಲಿ ರಾಮದೇವರ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಹಿನ್ನಲೆ ಬೆಳಿಗ್ಗೆಯಿಂದಲೇ ರಾಮಮಂದಿರದಲ್ಲಿ ಪೂಜಾ ಕೈಂಕರ್ಯ ಆರಂಭವಾಗಿದ್ದು, ಬೆಳಗಿನ ಜಾವ 5 ಗಂಟೆಯಿಂದಲೂ ಹೋಮ-ಹವನ, ಗಣಪತಿ ಹೋಮ, ಅಧಿವಾಸ, ಪ್ರತಿಷ್ಠಾಪನಾ ಹೋಮವನ್ನು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಶಿಷ್ಯ ವೃಂದ ನೆರವೇರಿಸುತ್ತಿದ್ದಾರೆ. ಪೂಜೆಗೆ ನಾದಸ್ವರಗಳ ಹಿಮ್ಮೇಳವಿದೆ.
ಲೇಬರ್ ಕಾಲೋನಿ ನಿವಾಸಿಗಳ 14 ವರ್ಷಗಳ ಪರಿಶ್ರಮದಿಂದ ದೇಗುಲ ನಿರ್ಮಾಣಗೊಂಡಿದೆ. ಇಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆ ಬಡಾವಣೆಯಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.