ಶ್ರೀರಂಗಪಟ್ಟಣ: ಇಂದಿನಿಂದ ಮೂರು ದಿನ ಪಾರಂಪರಿಕ ನಗರಿಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಮದುವಣಗಿತ್ತಿಯಂತೆ ಶ್ರೀರಂಗಪಟ್ಟಣ ಸಿಂಗಾರಗೊಂಡಿದೆ.
ವಿವಿಧ ಹೂವುಗಳಿಂದ ಬನ್ನಿ ಮಂಟಪಕ್ಕೆ ಸಿಂಗಾರ ಮಾಡಲಾಗಿದ್ದು, ಹೂವು ಮತ್ತು ಬಣ್ಣ ಬಣ್ಣದ ಸ್ಕ್ರೀನ್ ಗಳಿಂದ ಅಲಂಕಾರ ಮಾಡಿದ್ದಾರೆ.
ಮರದ ಅಂಬಾರಿಗೂ ಅಲಂಕಾರ ಮಾಡುವ ಕಾರ್ಯ ಆರಂಭವಾಗಿದ್ದು, ಅಂಬಾರಿ ಮೇಲೆ ನಾಡ ದೇವತೆ ಚಾಮುಂಡಿ ಕೂರಿಸಿ ನಂದಿ ಧ್ವಜ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ.
2.30ರಿಂದ 3.15ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ದಸರಾಗೆ ಚಾಲನೆ ನೀಡಲಾಗುತ್ತಿದೆ.
ಬನ್ನಿ ಪೂಜೆ ಬಳಿಕ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ಜಂಬೂಸವಾರಿಗೆ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ.

ಬನ್ನಿ ಮಂಟಪದಿಂದ ಆರಂಭವಾಗಿ ಶ್ರಿರಂಗನಾಥ ದೇವಾಲಯದವರೆಗೆ ಜಂಬೂಸವಾರಿ ನಡೆಯಲಿದೆ.
ಬಾನುಪ್ರಕಾಶ್ ಶರ್ಮಾ ನೇತೃತ್ವ ತಂಡದಿಂದ ಪೂಜಾ ಕೈಂಕರ್ಯ ನಡೆಯಲಿದ್ದು, ಸಚಿವ ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಮಹೇಂದ್ರ ಆನೆ ಅಂಬಾರಿ ಹೊರಲಿದೆ. ಈ ಹಿನ್ನಲೆ ಶ್ರೀರಂಗಪಟ್ಟಣಕ್ಕೆ ಮಹೇಂದ್ರ, ವಿಜಯ ಹಾಗೂ ವರಲಕ್ಷ್ಮೀ ಆನೆಗಳು ನಗರಕ್ಕೆ ಆಗಮಿಸಿದ್ದು, ಮಧ್ಯಾಹ್ನ 2.30 ಕ್ಕೆ ಜಂಬೂಸವಾರಿ ಆರಂಭವಾಗಲಿದೆ.
ಈ ಹಿನ್ನೆಲೆ ಮೂರು ಆನೆಗಳಿಗೂ ಚಿತ್ರಾಲಂಕಾರ ಮಾಡಲಾಗುತ್ತಿದ್ದು, ಸೊಂಡಿಲಿಗೆ ಗಂಡಬೇರುಂಡ, ಕಿವಿಗಳಿಗೆ ಶಂಖ ಸೇರಿದಂತೆ ಹಲವು ಚಿತ್ರಾಲಂಕಾರ ಮಾಡಲಾಗುತ್ತಿದೆ.
