ಮೈಸೂರು: ಕೊರೊನಾ ಕಾಲದಲ್ಲಿ ನಡೆದಿರುವ ಹಗರಣದ ವರದಿ ಸಲ್ಲಿಕೆಯಾಗಿದ್ದು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಹಾಗಾಯ್ತು ಎಂದು ಸಂಸದ ಡಾ.ಕೆ. ಸುಧಾಕರ್‌ಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಯ ವರದಿಯನ್ನು ನಾನೇ ಇನ್ನೂ ನೋಡಿಲ್ಲ. ವಿರೋಧ ಪಕ್ಷಗಳಿಗೆ ವರದಿ ಕೊಟ್ಟವರು ಯಾರು ವರದಿ ನೋಡದೆಯೇ ಅವರು ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಕೋವಿಡ್ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖಾ ಆಯೋಗವು ನೀಡಿರುವ ವರದಿಯನ್ನು ಗುರುವಾರ ಸಂಪುಟ ಸಭೆಯ ಮುಂದೆ ಇಡಲಾಗುವುದು. ನಂತರವಷ್ಟೇ ಕ್ರಮದ ಕುರಿತು ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.