ನೂರಾರು ಕೋಟಿ ಅಕ್ರಮದ ಉಲ್ಲೇಖ, ಸಿಎಸ್ ನೇತೃತ್ವದಲ್ಲಿ ವರದಿ ಅಧ್ಯಯನ
ಬೆಂಗಳೂರು: ಕೋವಿಡ್ ನಿರ್ವಹಣೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ನೇತೃತ್ವದ ವಿಚಾರಣಾ ಆಯೋಗದ ಮಧ್ಯಂತರ ವರದಿಯ ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ವರದಿಯನ್ನು ವಿರೋಧಿಗಳ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.
ವಾರದ ಹಿಂದಷ್ಟೇ ಮಧ್ಯಂತರ ವರದಿಯನ್ನು ನ್ಯಾ. ಡಿ ಕುನ್ಹಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದರು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ಹೆಚ್ಚುವರಿ ವಿಷಯವಾಗಿ ಸೇರಿಸಿ ಚರ್ಚೆ ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿರುವುದು ಮತ್ತು ಕಡತಗಳು ನಾಪತ್ತೆ ಆಗಿರುವುದು ವರದಿಯಲ್ಲಿ ಉಲ್ಲೇಖಿತವಾಗಿದೆ.
ಆದ್ದರಿಂದ, ವರದಿಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ನೇತೃತ್ವದ ಸಮಿತಿಗೆ ಅಧ್ಯಯನ ನಡೆಸಿ ವರದಿ ಕೊಡಲು ಸೂಚಿಸಿದ್ದೇವೆ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಂದು ತಿಂಗಳೊಳಗೆ ಸಮಿತಿ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಿದೆ. ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ, ವಿಚಾರಣಾ ಆಯೋಗದ ಕಾರ್ಯಾವಧಿಯನ್ನು ಇನ್ನೂ ಆರು ತಿಂಗಳು ಮುಂದುವರೆಸಲು ಸಂಪುಟ ಒಪ್ಪಿಗೆ ನೀಡಿದೆ. ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಆಯೋಗದ ವರದಿಯನ್ನು ಮಂಡಿಸಲಾಗುವುದು ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಯಾವ ಅಧಿಕಾರಿಗಳು ಇದ್ದರು, ಅವರು ವಿಚಾರಣಾ ಆಯೋಗದ ಮುಂದೆ ಯಾವ ಕಾರಣಕ್ಕಾಗಿ ಕಡತಗಳನ್ನು ಒಪ್ಪಿಸಿಲ್ಲ ಎಂಬುದರ ಬಗ್ಗೆಯೂ ಅಧ್ಯಯನ ನಡೆಯಲಿದೆ. ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯನ್ನೂ ವಿಚಾರಣಾ ಆಯೋಗ ಗಮನಿಸಿದೆ ಎಂದು ಪಾಟೀಲ ವಿವರಿಸಿದರು. ಈ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಹೆಸರುಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.