ಬೆಂಗಳೂರು: ಕಳೆದ ೨೪ ಗಂಟೆಗಳಲ್ಲಿ ಕೋವಿಡ್ ದೃಢಪಟ್ಟ ೧೦೩ ಪ್ರಕರಣಗಳು ವರದಿಯಾಗಿದ್ದು, ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದ ಮೈಸೂರಿನ ೫೩ ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಎಂದಿನಂತೆ, ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ೮೦ ಪ್ರಕರಣಗಳು ದಾಖಲಾಗಿವೆ. ಉಳಿದಂತೆ, ಮಂಡ್ಯದಲ್ಲಿ ೮, ಬಳ್ಳಾರಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ತಲಾ ೩ ಪ್ರಕರಣ ವರದಿಯಾಗಿವೆ.
ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೪೭೯ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ, ಚಿಕಿತ್ಸೆ ನಂತರ ೮೭ ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ೫,೬೦೭ ಆರ್‌ಟಿಪಿಸಿಆರ್ ಮತ್ತು ೧,೬೫೫ ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆಗಳು ಸೇರಿದಂತೆ ಒಟ್ಟು ೭,೨೬೨ ಪರೀಕ್ಷೆಗಳನ್ನು ನಡೆಸಲಾಗಿದೆ. ಕೋವಿಡ್ ಪಾಸಿಟಿವ್ ಪ್ರಮಾಣವು ಶೇ ೧.೪೧ ರಷ್ಟಿದ್ದರೆ, ಸಾವಿನ ಪ್ರಮಾಣವು ಶೇ ೦.೯೭ ರಷ್ಟಿದೆ. ೪೭೯ ಸಕ್ರಿಯ ಪ್ರಕರಣಗಳ ಪೈಕಿ ೪೨೨ ಮಂದಿ ಮನೆಗಳಲ್ಲಿ ಪ್ರತ್ಯೇಕ ವಾಸದಲ್ಲಿದ್ದಾರೆ. ೫೭ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ೧೯ ಮಂದಿ ತೀವ್ರ ನಿಗಾದಲ್ಲಿದ್ದಾರೆ.
ಕಳೆದ ೨೪ ಗಂಟೆಗಳಲ್ಲಿ ಮೈಸೂರಿನಲ್ಲಿ ೩, ಮಂಡ್ಯದಲ್ಲಿ ೮ ಹಾಗೂ ಚಾಮರಾಜನಗರದಲ್ಲಿ ೨ ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ ಒಟ್ಟು ೩೨ ಮಂಡ್ಯದಲ್ಲಿ ೧೧ ಹಾಗೂ ಚಾಮರಾಜನಗರದಲ್ಲಿ ೪ ಸಕ್ರಿಯ ಪ್ರಕರಣಗಳಿವೆ.