ಎಚ್.ಡಿ.ಕೋಟೆ: ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷಿಕ ಪ್ರಕಾಶ್ ಎಂಬುವವರ ಜಮೀನಿನಲ್ಲಿ ನಿನ್ನೆ ಚಿರತೆ ದಾಳಿ ಮಾಡಿದ ಪರಿಣಾಮ ಜಾನುವಾರು ಸ್ಥಳದಲ್ಲಿಯೇ ಮೃತಪಟ್ಟಿದೆ.
ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ರೈತರು ಜಮೀನುಗಳಲ್ಲಿ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆಯಲ್ಲಿ ನೀರು ಹಾಯಿಸಲು ತೀವ್ರ ಸಮಸ್ಯೆ ಎದುರಾಗಿದೆ. ಬೆಳೆಗಳು ಒಣಗುತ್ತಿವೆ ಎಂದು ರೈತ ಪ್ರಕಾಶ್ ತಿಳಿಸಿದರು.
ಅರಣ್ಯ ಇಲಾಖೆಗೆ ಚಿರತೆ ಓಡಾಟದ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದು, ಚಿರತೆಯ ಸೆರೆಗಾಗಿ ಬೋನು ಇರಿಸುವಂತೆ ಒತ್ತಾಯ ಮಾಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.