ಕೂದಲಂತರದಿಂದ ಹುಲಿಯ ದಾಳಿಯಿಂದ ಪಾರಾದ ಮಹಿಳೆ ಅನಿತಾ
ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಹಾಡಹಗಲಿನಲ್ಲೇ ಮಧ್ಯಾಹ್ನ 12:30ಕ್ಕೆ ಹಸುವನ್ನು ಕಟ್ಟಿಹಾಕುತ್ತಿದ್ದ ಮಹಿಳೆಯ ಮೇಲೆ ಎರಗಲು ಬಂದ ಹುಲಿಯನ್ನು ನೋಡಿ ಅನಿತಾ ತಪ್ಪಿಸಿಕೊಂಡಿದ್ದಾರೆ. ನಂತರ ಅಲ್ಲೇ ಇದ್ದ ಹಸುವಿನ ಮೇಲೆ ದಾಳಿ ಮಾಡಿದೆ. ಹುಲಿಯ ಅಟ್ಟಹಾಸಕ್ಕೆ ಉದ್ರಿಕ್ತರಾದ ಗ್ರಾಮಸ್ಥರು ತಾಲೂಕಿನ ಕೆ.ಎಡತೊರೆ ಗ್ರಾಮದ ಹುಣಸೂರು ಬೇಗೂರು ರಸ್ತೆ ಮಧ್ಯದಲ್ಲಿ ಹಸು ಕಳೆಬರ ರಸ್ತೆಯಲ್ಲಿಟ್ಟು ರಸ್ತೆ ತಡೆ ನಡೆಸಿದ ಘಟನೆ ನಡೆಯಿತು.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಎಚ್.ಡಿ.ಕೋಟೆ ಹಾಗೂ ವೀರನಹೊಸಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿದಾಗ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಹುಲಿ ಸೆರೆ ಹಿಡಿದು ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿ ಪ್ರತಿಭಟನಾಕಾರರ ಮನ ಒಲಿಸಿದಾಗ ಕುಪಿತರಾಗಿದ್ದ ಸಾರ್ವಜನಿಕರು ಶಾಂತರಾಗಿ ಪ್ರತಿಭಟನೆ ಕೈಬಿಟ್ಟರು.
ಏನಿದು ಘಟನೆ ?
ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 4-5ಕಿಮೀ ಅಂತರದ ಟೈಗರ್ ಬ್ಲಾಕ್, ಗಣೆಶಡ್ಡು, ಕೆ.ಎಡತೊರೆ ಆಸುಪಾಸಿ ಗ್ರಾಮಗಳಲ್ಲಿ ಕಳೆದ 2ತಿಂಗಳಿಂದ ಹುಲಿ ಪ್ರತ್ಯಕ್ಷಗೊಂಡು ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವುದೇ ಅಲ್ಲದೆ ಅಹೋರಾತ್ರಿ ಅಲ್ಲಲ್ಲಿ ಸಾರ್ವಜನಿಕರಿಗೆ ಗೋಚರಿಸಿ ಭಯದ ವಾತಾವರಣ ನಿರ್ಮಾಣ ಮಾಡಿದೆ.
ಅದರಂತೆಯೇ ಸೋಮವಾರ ಹಾಡಹಗಲಿನ ಮಧ್ಯಾಹ್ನದ ವೇಳೆಯಲ್ಲಿ ಕೆ.ಎಡತೊರೆ ಗ್ರಾಮದ ಅನಿತ ಎಂಬುವವರಿಗೆ ಸೇರಿದ ಹಸುವಿನ ಮೇಲೆರಗಿ ಕೊಂದು ತಿನ್ನುತ್ತಿದ್ದಾಗ ಅನಿತ ಈ ದೃಶ್ಯ ಕಂಡು ಚೀರಾಡಿದಾಗ ಅವರ ಮೇಲೂ ಎರಗಲು ಹುಲಿ ಮುಂದಾಗುತ್ತಿದ್ದಂತೆಯೇ ನೆರೆಹೊರೆಯವರ ಸಹಕಾರದಿಂದ ಹುಲಿ ಸತ್ತ ಹಸು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ.

ಇಲ್ಲಿಯ ತನಕ 10ಕ್ಕೂ ಅಧಿಕ ಹಸುಗಳು, ಮೇಕೆಗಳು ಹುಲಿ ಪಾಲಾಗಿದ್ದು, ಹುಲಿ ಸೆರೆ ಹಿಡಿಯಲು ಎಚ್.ಡಿ.ಕೋಟೆ ಮತ್ತು ವೀರನಹೊಸಳ್ಳಿ ಅರಣ್ಯ ಇಲಾಖೆಗಳ ನಡುವೆ ಸರಹದ್ದು ನಮಗೆ ಸೇರಲ್ಲ ಎನ್ನುವ ಉತ್ತರ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಷಯ ಕುರಿತು ಉಭಯ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡಾಗ ಅರಣ್ಯ ಇಲಾಖೆ ಸಭೆ ನಡೆಸಿ ನಾಳೆಯಿಂದಲೇ ಸರಹದ್ದು ಯಾರಿಗೆ ಸೇರಿದ್ದೆಂದು ಖಾತರಿ ಪಡಿಸಿಕೊಳ್ಳುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದರು.
ಇಂದೇ ಹುಲಿ ಸೆರೆಗೆ ಬೋನಿರಿಸಿ ತಂತ್ರ ರೂಪಿಸುವುದೇ ಅಲ್ಲದೆ ಎಚ್ಚರದಿಂದ ಗಸ್ತು ನಡೆಸಿ ಹುಲಿ ಸೆರೆಗೆ ಶತಾಯಗತಾಯ ತಂತ್ರ ರೂಪಿಸುವ ಭರವಸೆ ನೀಡಿದರು. ಇಲ್ಲಿಯ ತನಕ ಹುಲಿ ದಾಳಿಯಿಂದ ಮೃತಪಟ್ಟ ಹಸು ಮೇಕೆ ಕುರಿಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ ಮುಂದೆ ಇಂತಹ ಅವಗಡ ಸಂಭವಿಸದಂತೆ ಎಚ್ಚರವಹಿಸುತ್ತೇವೆ ಎನ್ನುವ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಕೆಲಕಾಲ ಎಚ್.ಡಿ.ಕೋಟೆ ಮತ್ತು ಎನ್.ಬೇಗೂರು ರಸ್ತೆ ಮಾರ್ಗದ ಸಂಚಾರ ಬಂದ್ ಆಗಿತ್ತು. ಎಚ್.ಡಿ.ಕೋಟೆ ವಲಯ ಆರಣ್ಯಾಧಿಕಾರಿ ಪೂಜಾ ವೀರನಹೊಸಳ್ಳಿಯ ಅಭಿಷೇಕ್, ಸರ್ಕಲ್ ಇನ್ಸ್‌ಪೆಕ್ಟರ್ ಶಬ್ಬಿರ್ ಹುಸೇನ್, ಪಿಎಸ್‌ಐ ಪ್ರಕಾಶ್ ಪೊಲೀಸ್ ಮಾದೇವಸ್ವಾಮಿ, ಯೋಗೇಶ್, ಎಎಸ್ಐ ಉಮೇಶ್, ಗ್ರಾಮಸ್ಥರಾದ YN ಕುಮಾರ್ ಗಂಗಾಧರ್ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್ ಮಹೇಶ್, ನಂದೀಶ್, ಡಿ ಶೇಖರ, ರಿಜ್ವಾನ್ ಖಾನ್, ನರಸಿಂಹಮೂರ್ತಿ ಬಿಟಿ ಉಮೇಶ್,ಲೋಕೇಶ್ ಗೋವಿಂದರಾಜು, ಚೆಲುವ, ಸುಮನ್ , ಅಶ್ವಿನ, ಮಣಿಕಂಠ, ರಾಜೇಶ್, ವಸಂತ, ದ್ರಾಕ್ಷಾಯಿಣಿ, ಅನಿತಾ, ಸೇರಿದಂತೆ ಅರಣ್ಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು ಮತ್ತು ಸುಮಾರು 300 ರೈತರು, ಗ್ರಾಮಸ್ಥರು ಇದ್ದರು.