ಚಾಮರಾಜನಗರ: ವನ್ಯಜೀವಿ ದಾಳಿಯಿಂದ ಹಸುವೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕಿಲಗೆರೆ ಗ್ರಾಮದಲ್ಲಿಇಂದು ಮಂಗಳವಾರ ನಡೆದಿದೆ.
ಗ್ರಾಮದ ಸಿದ್ದರಾಜು ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ತಮ್ಮ ಜಮೀನನಲ್ಲಿ ಮೇಯಲು ಬಿಟ್ಟಿದ್ದಾಗ ಹುಲಿಯೋ ಅಥವಾ ಚಿರತೆಯೋ ದಾಳಿ ನಡೆಸಿ ಹಸುವನ್ನು ಕೊಂದುಹಾಕಿದೆ.
ವಿಷಯ ತಿಳಿದು ಸ್ಥಳಕ್ಕೆ ಬಿಆರ್ಟಿ ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆ ವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ದಾಳಿ ನಡೆಸಿದ ಸ್ಥಳದಲ್ಲಿ ಯಾವುದೇ ಹೆಜ್ಜೆ ಗುರುತು ಪತ್ತೆಯಾಗದೇ ಇರುವುದರಿಂದ ಹುಲಿ ಅಥವಾ ಚಿರತೆ ದಾಳಿ ನಡೆಸಿರಬುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ:
ವನ್ಯಜೀವಿ ದಾಳಿಯಿಂದ ಹಸು ಮೃತಪಟ್ಟ ವಿಚಾರ ತಿಳಿದು ಗ್ರಾಮಸ್ಥರು ಭಯಭೀತರಾಗಿದ್ದು, ಘಟನಾ ಸ್ಥಳದಲ್ಲಿ ಬೋನ್ ಇರಿಸಿ ರಕ್ಷಣೆ ನೀಡಬೇಕು. ಅಲ್ಲದೇ ಜೀವನಕ್ಕೆ ಆಧಾರವಾಗಿದ್ದ ಹಸು ಮೃತಪಟ್ಟಿದ್ದು, ರೈತನಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.



