ಮಂಗಳೂರು (ದಕ್ಷಿಣ ಕನ್ನಡ): ರಾಜ್ಯದಲ್ಲಿ ಸಂಕ್ರಾಂತಿ ಹಬ್ಬದ ದಿನ ಮನೆ ಮನೆಗಳಲ್ಲಿ ಗೋವುಗಳನ್ನು ಪೂಜಿಸಲಾಗುತ್ತದೆ. ಅಂತಹ ಸಂದರ್ಭದಲ್ಲೇ ಗೋವುಗಳ ಕೆಚ್ಚಲು ಕೊಯ್ಯುವಂತಹ ರಾಕ್ಷಸೀ ಕೃತ್ಯ ನಡೆದಿದೆ. ಗೋವುಗಳಿಗೆ ರಕ್ಷಣೆ ನೀಡದ ಸರ್ಕಾರ ರಾಜ್ಯದಲ್ಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕೊಯ್ದ ಪ್ರಕರಣವನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಮಂಗಳೂರಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ‘ಮಹಾತ್ಮ ಗಾಂಧೀಜಿಯ ವಿಚಾರವನ್ನುಆಧರಿಸಿದ ಪಕ್ಷ ತಮ್ಮದು ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ಗಾಂಧೀಜಿಯವರು ಗೋವುಗಳಿಗೆ ರಕ್ಷಣೆ ಒದಗಿಸುವಂತೆ ಹೇಳಿದ್ದರು. ಕಾಂಗ್ರೆಸ್ ಯಾವ ಮುಖ ಇಟ್ಟು ಕೊಂಡು ಗಾಂಧೀಜಿಯವರ ತತ್ವವನ್ನು ಪ್ರತಿಪಾದಿಸುತ್ತದೆ’ ಎಂದು ಅವರು ಪ್ರಶ್ನಿಸಿದರು.
‘ಯಾರೊ ಬಿಹಾರದ ವ್ಯಕ್ತಿಯನ್ನು ಬಂಧಿಸಿ ಆತನೇ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಅವನೇ ಈ ಕೃತ್ಯ ನಡೆಸಿರುವುದಕ್ಕೆ ಏನು ಸಾಕ್ಷಿ ಇದೆ. ನಮ್ಮ ರಾಜ್ಯದವರು ಯಾರೂ ಮಾಡಿಲ್ಲವೇ? ಜನರ ಕಣ್ಣಿಗೆ ಮಣ್ಣೆರಚಲು ಯಾರನ್ನೋ ಬಂಧಿಸಿದ್ದೀರಿ. ನಿಜವಾದ ತಪ್ಪಿತಸ್ಥರೆಲ್ಲರನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು.