ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಇಂದಿನಿಂದ ಬ್ರೇಕ್ ಬೀಳಲಿದೆ. ನ್ಯಾಯಾಲಯದ ಆದೇಶದಂತೆ ಸರ್ಕಾರ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇದರಂತೆ ಇಂದು (ಜೂನ್ 16) ರಿಂದ ರಸ್ತೆಗಿಳಿಯುವ ಯಾವುದೇ ಅನಧಿಕೃತ ಬೈಕ್ ಟ್ಯಾಕ್ಸಿಯನ್ನು ಸ್ಥಳದಲ್ಲೇ ಸೀಜ್ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ.
ಟ್ರಾಫಿಕ್ ಕಡಿಮೆ, ಟ್ರಾವೆಲ್ ದರವೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ವಿಕ್ ಡ್ರಾಪ್ ಪಾಯಿಂಟ್. ಶರವೇಗದಲ್ಲಿ ಜನರಿಗೆ ಬೇಕಾದ ಜಾಗ ತಲುಪಿಸುವ ಕೆಲಸ ಮಾಡುತ್ತಿದ್ದದ್ದು, ಅಂದರೆ ಅದು ಬೈಕ್ ಟ್ಯಾಕ್ಸಿ. ವೈಟ್ ಬೋರ್ಡ್‌ನಲ್ಲಿ ಬೈಕ್ ಟ್ಯಾಕ್ಸಿ ಓಡಿಸೋದು ಸೇರಿ ಸುರಕ್ಷತೆ ವಿಚಾರದಲ್ಲಿ ಬೈಕ್ ಟ್ಯಾಕ್ಸಿ ಒಂದು ಹೆಜ್ಜೆ ಹಿಂದೆಯೇ ಉಳಿದುಕೊಂಡಿದೆ. ಇದೇ ಕಾರಣಕ್ಕೆ ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗೆ ಇಳಿಯುವ ಹಾಗಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಆರ್‌ಟಿಓ ಕೂಡ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಲಿದೆ.
ಅನಧಿಕೃತ ಬೈಕ್ ಟ್ಯಾಕ್ಸಿ ಓಡಾಟಕ್ಕೆ ನಿಷೇಧ ಹೇರಬೇಕೆಂದು ಖಾಸಗಿ ಸಾರಿಗೆ ಒಕ್ಕೂಟ ಸೇರಿ ಅನೇಕ ಆಟೋ ಚಾಲಕರ ಹಲವು ವರ್ಷಗಳ ಬೇಡಿಕೆಯಾಗಿತ್ತು. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಓಡಾಟಕ್ಕೆ ಕೋರ್ಟ್ ನೀಡಿದ್ದ ಗಡುವು ಇಂದಿಗೆ ಮುಕ್ತಾಯ ಆಗಿದೆ. ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ಹೇರಿ ಏಪ್ರಿಲ್ 2ರಂದು ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ಕೋರಿ ಓಲಾ, ಊಬರ್‌ನಂತಹ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದಾರೆ.
ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳಿಗೆ ನ್ಯಾಯಾಲಯದ ಆದೇಶದ ಬೆನ್ನಲ್ಲೇ ಸರ್ಕಾರ ತೀವ್ರ ಕ್ರಮ ಕೈಗೊಂಡಿದೆ. ಇಂದಿನಿಂದ ಇಂತಹ ಟ್ಯಾಕ್ಸಿಗಳು ರಸ್ತೆಗಿಳಿದರೆ, ತಕ್ಷಣವೇ ವಾಹನವನ್ನು ಸೀಜ್ ಮಾಡುವ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ 10 ರಿಂದ 15 ತಂಡಗಳನ್ನು ರಚಿಸಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಡ್ಡಾಯವಾಗಿ ಅನಧಿಕೃತ ಸೇವೆಗಳನ್ನು ತಡೆಗಟ್ಟಲು ತೀರ್ಮಾನಿಸಲಾಗಿದೆ.