ಬಳ್ಳಾರಿ: ಮಕ್ಕಳ ಸರ್ವಾಂಗೀಣಾ ಅಭಿವೃದ್ಧಿಗೆ ಸಮಾಜ ಹಾಗೂ ಶಾಲೆ, ವಸತಿ ನಿಲಯಗಳಲ್ಲಿ ಪೂರಕ ವಾತಾವರಣ ಕಲ್ಪಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಭಾಗೀದಾರರೊಂದಿಗೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ, ಮಕ್ಕಳ ಪಾಲನಾ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಅವರು ಮಾತನಾಡಿದರು.
ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಣಂತಿಯರಿಗೆ ಸರಿಯಾದ ಶೌಚಾಲಯ ಸೇರಿದಂತೆ ಬಿಸಿ ನೀರಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಚಳಿಗಾಲ ಸಂದರ್ಭದಲ್ಲಿ ಬಾಣಂತಿಯರ ಕ್ಷೇಮ ಅತಿ ಮುಖ್ಯವಾದುದು. ಈ ಕೂಡಲೇ ತುರ್ತಾಗಿ ಕ್ರಮ ವಹಿಸಬೇಕು ಎಂದು ವಿಮ್ಸ್ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಪೌಷ್ಟಿಕ ಪುನರ್ಚೇತನ ಘಟಕದಲ್ಲಿ ಮೂವರು ಮಕ್ಕಳನ್ನು ಒಂದೇ ಬೆಡ್‍ನಲ್ಲಿ ಆರೈಕೆ ಮಾಡುವುದು ಕಂಡುಬಂದಿದ್ದು ನೋಡಿ ಬೇಸರ ವ್ಯಕ್ತಪಡಿಸಿದರು. ತಾಯಿ ಮಕ್ಕಳ ಆಸ್ಪತ್ರೆಯ ಕಟ್ಟಡ ಪೂರ್ಣಗೊಂಡಿದ್ದು, ಯಾಕೆ ಇನ್ನೂ ಆರಂಭವಾಗಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು, ಸಮುದಾಯ ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಸಭೆ ನಡೆಸಿ, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ ಕುರಿತು, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ನಿರ್ದೇಶನ ನೀಡಿದರು.

ಕಂಪ್ಲಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ವಸತಿ ಶಾಲೆಯು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ, ಶಾಲೆಯ ಆವರಣದಲ್ಲಿ ಹಂದಿ ಹಾವಳಿ ಇದೆ. ಮಕ್ಕಳು 50 ಕ್ಕೂ ಹೆಚ್ಚು ಮಕ್ಕಳು ಗೈರು ಹಾಜರಾಗಿದ್ದಾರೆ. ಶಿಕ್ಷಕರು ಗೈರಾಗಿದ್ದರು. ಆಹಾರ ಪದ್ಧತಿಯಲ್ಲಿ ನ್ಯೂನತೆ ಕಂಡು ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕೂಡಲೇ ಸೂಕ್ತ ಕಟ್ಟಡಕ್ಕಾಗಿ ಕೇಂದ್ರ ಕಚೇರಿಗೆ ಪತ್ರ ಬರೆಯಬೇಕು. ತ್ವರಿತವಾಗಿ ಬಿಸಿ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಯಾದಗಿರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಮರುಕಳಿಸಬಾರದು ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.