ಕರ್ನಾಟಕದ ಸ್ಟಾರ್ ಆಟಗಾರ ಮನೀಶ್ ಪಾಂಡೆ ಮೇಲೆ ಬೌಲಿಂಗ್ನಿಷೇಧ ಹೇರಲಾಗಿದೆ. ಬಿಸಿಸಿಐ ಪ್ರಕಟಿಸಿರುವ ಅನುಮಾನಸ್ಪದ ಬೌಲಿಂಗ್ ಶೈಲಿ ಪಟ್ಟಿಯಲ್ಲಿ ಮನೀಶ್ ಪಾಂಡೆ ಸೇರಿದಂತೆ ಒಟ್ಟು 8 ಆಟಗಾರರ ಹೆಸರು ಕಾಣಿಸಿಕೊಂಡಿದೆ. ಇದರಲ್ಲಿ ಮನೀಶ್ ಪಾಂಡೆ ಹಾಗೂ ಕೆಎಲ್ ಶ್ರೀಜಿತ್ ಅವರಿಗೆ ಬೌಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.
ಅಂದರೆ ಈ ಇಬ್ಬರು ಆಟಗಾರರ ಬೌಲಿಂಗ್ ಶೈಲಿಯಲ್ಲಿ ದೋಷಗಳಿವೆ. ಹೀಗಾಗಿ ಇವರನ್ನು ಬೌಲರ್ಗಳಾಗಿ ಬಳಸಿಕೊಳ್ಳುವಂತಿಲ್ಲ ಎಂದು ಬಿಸಿಸಿಐ ಸೂಚಿಸಿದೆ. ಹಾಗಾಗಿ ಇನ್ಮುಂದೆ ಮನೀಶ್ ಪಾಂಡೆಯನ್ನು ಯಾವುದೇ ತಂಡ ಬೌಲರ್ ಆಗಿ ಬಳಸಿಕೊಳ್ಳುವುದಿಲ್ಲ. ಒಂದು ವೇಳೆ ಅವರು ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಟೆಸ್ಟ್ ಪಾಸ್ ಆದರೆ ಮಾತ್ರ ಅವಕಾಶ ದೊರೆಯಲಿದೆ.
ಮನೀಶ್ ಪಾಂಡೆ ಬೌಲರಾ?
ಕ್ರಿಕೆಟ್ ಅಂಗಳದಲ್ಲಿ ಮನೀಶ್ ಪಾಂಡೆ ಬ್ಯಾಟ್ಸ್ಮನ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಹಾಗೆಯೇ ದೇಶೀಯ ಟೂರ್ನಿಗಳಲ್ಲಿ ಅವರು ಇದುವರೆಗೆ 193.5 ಓವರ್ಗಳನ್ನು ಮಾಡಿದ್ದಾರೆ. ಈ ವೇಳೆ 23 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಅವರ ಮೇಲಿನ ನಿಷೇಧ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ.
ಅನುಮಾನಾಸ್ಪದ ಶೈಲಿಯ ಬೌಲರ್ಗಳು:
ಅನುಮಾನಾಸ್ಪದ ಬೌಲಿಂಗ್ ಶೈಲಿ ಹೊಂದಿರುವ ದೇಶೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆಯ ತನುಷ್ ಕೋಟ್ಯಾನ್, ಕೇರಳ ಕ್ರಿಕೆಟ್ ಸಂಸ್ಥೆಯ ರೋಹನ್ ಕುನ್ನುಮಲ್, ಗುಜರಾತ್ ಕ್ರಿಕೆಟ್ ಸಂಸ್ಥೆಯ ಚಿರಾಗ್ ಗಾಂಧಿ, ಕೇರಳ ಕ್ರಿಕೆಟ್ ಸಂಸ್ಥೆಯ ಸಲ್ಮಾನ್ ನಿಜಾರ್, ವಿದರ್ಭ ಕ್ರಿಕೆಟ್ ಸಂಸ್ಥೆಯ ಸೌರಭ್ ದುಬೆ ಮತ್ತು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅರ್ಪಿತ್ ಗುಲೇರಿಯಾ ಪಟ್ಟಿಯಲ್ಲಿದ್ದಾರೆ. ಇದಲ್ಲದೇ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪರ ಆಡುವ ಮನೀಶ್ ಪಾಂಡೆ ಮತ್ತು ಕೆಎಲ್ ಶ್ರೀಜಿತ್ ಬೌಲಿಂಗ್ ನಿಷೇಧ ಹೇರಲಾಗಿದೆ.