ವರದಿ ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ತಾಲೂಕಿನ ಬೆಕ್ಕರೆ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿ ಆಶೀರ್ವಾದದೊಂದಿಗೆ ಗ್ರಾಮಸ್ಥರ ಸಹಕಾರದೊಂದಿಗೆ ಬಿಪಿಎಲ್ ಸೀಸನ್ -೧ ಕ್ರಿಕೆಟ್ ಟೂರ್ನಿಗೆ ಇಂದು ಭಾನುವಾರ ಚಾಲನೆ ನೀಡಲಾಯಿತು.
ಗ್ರಾಮದ ಹೊರವಲಯದ ಮೂರೂರಮ್ಮ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಬೆಕ್ಕರೆ ಸೂಪರ್ ಕಿಂಗ್ಸ್, ಬೆಕ್ಕರೆ ಟೈಟಾನ್ಸ್, ಬೆಕ್ಕರೆ ಇಂಡಿಯನ್ಸ್, ಬೆಕ್ಕರೆ ನೈಟ್ ರೈಡರ್, ಬೆಕ್ಕರೆ ಜೈ ಭೀಮ್, ರಾಯಲ್ಸ್ ಚಾಲೆಂಜರ್ಸ್ ಬೆಕ್ಕರೆ, ಕಿಂಗ್ಸ್ ಇಲೆವೆನ್ ಬೆಕ್ಕರೆ, ಬೆಕ್ಕರೆ ರಾಯಲ್ಸ್ ತಂಡ ಸೇರಿದಂತೆ ಒಟ್ಟು ೮ ತಂಡಗಳು ಭಾಗವಹಿಸಿದ್ದವು, ಪಂದ್ಯಗಳು ನಡೆಯುತ್ತಿದ್ದ ವೇಳೆ ಗ್ರಾಮದ ಹಿರಿಯರು ಹಾಗೂ ಮಹಿಳೆಯರು ಕ್ರೀಡಾಂಗಣದಲ್ಲಿ ಹಾಜರಿದ್ದು ಆಟಗಾರರನ್ನು ಪ್ರೋತ್ಸಾಹಿಸುತ್ತಿದ್ದದ್ದು ವಿಶೇಷವಾಗಿತ್ತು, ಗ್ರಾಮದ ನಿವೃತ್ತ ಸೈನಿಕ ರವಿಕುಮಾರ್, ಉದ್ಯಮಿ ಪ್ರಕಾಶ್ ಹಾಗೂ ಇಂಜಿನಿಯರ್ ಸರ್ಪಭೂಷಣ್ ಆರಾಧ್ಯ ಅವರು ಉದ್ಘಾಟನೆ ವೇಳೆ ಹಾಜರಿದ್ದು ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಎಲ್ಲಾ ಆಟಗಾರರು ಕ್ರೀಡಾ ಸ್ಪೂರ್ತಿ ಮೈಗೂಡಿಸಿಕೊಂಡು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವಂತೆ ತಿಳಿಸಿದರು. ಈ ಸಂದರ್ಭ ಬೆಕ್ಕರೆ ಗ್ರಾಮಸ್ಥರು ಇದ್ದರು.