ಕೊಪ್ಪಳ: ಗಂಗಾವತಿ ಕಾಂಗ್ರೆಸ್ಸಿನಲ್ಲಿನ ಬಿಕ್ಕಟ್ಟು ಇಂದು, ನಿನ್ನೆಯದಲ್ಲ. ಈಗ ಬಿಕ್ಕಟ್ಟಿನ ಪರಿಣಾಮವಾಗಿಯೂ ಇಬ್ಬರು ಸಹ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿಯೇ ಶ್ರಮಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ ನಡುವೆ ಸಮಸ್ಯೆ ಇರುವುದು ನಿಜ. ಆದರೆ, ಅವರ್‍ಯಾರು ಸಹ ಕಾಂಗ್ರೆಸ್ ವಿರುದ್ಧವಾಗಿ ಮಾತನಾಡಿಲ್ಲ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿಯೇ ಶ್ರಮಿಸುವುದಾಗಿ ಹೇಳಿದ್ದಾರೆ. ಹೀಗಾಗಿ, ಗಂಗಾವತಿಯ ಸಮಸ್ಯೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಮಸ್ಯೆಯಾಗುವುದಿಲ್ಲ ಎಂದರು. ನಾನು ಇಕ್ಬಾಲ್ ಅನ್ಸಾರಿ ಮತ್ತು ಎಚ್.ಆರ್. ಶ್ರೀನಾಥ ಜೊತೆ ಮಾತನಾಡಿದ್ದೇನೆ. ಎರಡು ಪ್ರತ್ಯೇಕ ಸಭೆ ಮಾಡಿದ್ದರೂ ಅವರೆಡು ಅಧಿಕೃತ ಸಭೆಗಳೇ ಆಗಿವೆ ಎಂದರು.
ಇವರಿಬ್ಬರ ನಡುವೆ ಇರುವ ಸಮಸ್ಯೆ ಇಂದು ನಿನ್ನೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಇದನ್ನು ಈಗ ಚುನಾವಣೆಯ ಸಂದರ್ಭದಲ್ಲಿ ಇತ್ಯರ್ಥ ಮಾಡುವುದು ಅಸಾಧ್ಯವಾಗಿರುವುದರಿಂದ ಚುನಾವಣೆಯ ನಂತರ ಇತ್ಯರ್ಥ ಮಾಡಲು ಪ್ರಯತ್ನ ಮಾಡಲಾಗುವುದು. ಇಬ್ಬರನ್ನು ಒಂದೇ ವೇದಿಕೆಯಲ್ಲಿಯೂ ತರುವ ಪ್ರಯತ್ನ ಮಾಡಲಾಗುವುದು ಎಂದರು. ನನಗೆ ಇಬ್ಬರೂ ಮುಖ್ಯ ಮತ್ತು ಇದಕ್ಕಿಂತ ಹೆಚ್ಚಾಗಿ ಪಕ್ಷ ಮುಖ್ಯ. ಪಕ್ಷದ ಹಿತದೃಷ್ಟಿಯಿಂದ ನಾನಾ ಕಾರ್ಯ ನಿರ್ವಹಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಸಹ ಈ ಸಮಸ್ಯೆ ಇತ್ಯರ್ಥ ಮಾಡುವ ಪ್ರಯತ್ನ ಮಾಡಿ, ಇವರಿಬ್ಬರಿಗೂ ಸೂಚಿಸಿದ್ದಾರೆ. ಹೀಗಾಗಿ, ಹೈಕಮಾಂಡ್ ಇದೆಲ್ಲವನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದರು.