ಹನಗೋಡು: ಹನಗೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಬೆಳೆಗಳು ಜಲಾವೃತಗೊಂಡು ಆತಂಕ ಸೃಷ್ಟಿಸಿದೆ.
ಬುಧವಾರ ಸಂಜೆ ಸುರಿದ ಗುಡುಗು ಸಹಿತ ಹನಗೋಡು ಹೋಬಳಿಯಾದ್ಯಂತ ಗುಡುಗು ಸಹಿತ ಬಾರೀ ಮಳೆಯಾಗಿದ್ದು, ಹರೀನಹಳ್ಳಿ, ಕರ್ಣಕುಪ್ಪೆ, ಕಣಗಾಲು, ಹೆಮ್ಮಿಗೆ, ಮುತ್ತುರಾಯನಹೊಸಹಳ್ಳಿ, ಬೀರನಹಳ್ಳಿ, ಹೊನ್ನೇನಹಳ್ಳಿ, ಹನಗೋಡು, ಹೆಗ್ಗಂದೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಗಂಟೆಕಾಲ ಸುರಿದ ಮಳೆಗೆ ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ರಸ್ತೆಯಲ್ಲಿ ಮಳೆ ನೀರು ಹರಿದು ಮಣ್ಣನ್ನು ಹೊತ್ತೊಯ್ದಿದೆ. ಒಂದೇ ಮಳೆಗೆ ಹರೀನಹಳ್ಳಿ ಕೆರೆ, ಕಣಗಾಲು ಕೆರೆ ಸೇರಿದಂತೆ ಈ ಬಾಗದ ಕೆರೆಗಳಿಗೆ ಬಾರೀ ನೀರು ಹರಿದು ಕೆರೆಗಳಿಗೆ ಸಾಕಷ್ಟು ನೀರು ಹರಿದು ಬಂದಿದೆ.
ಹನಗೋಡು ಹೋಬಳಿಯ ಕರ್ಣಕುಪ್ಪೆ ಗ್ರಾ.ಪಂ. ಸದಸ್ಯ ಹರೀನಹಳ್ಳಿಯ ಕುಮಾರಸ್ವಾಮಿ ಸೇರಿದಂತೆ ಅನೇಕ ರೈತರ ಮೆಣಸು, ತಂಬಾಕು, ಮುಸುಕಿನ ಜೋಳದ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ರೈತರು ಬೆಳೆಗಳು ಕೊಳೆಯುವ ಭೀತಿಯಲ್ಲಿದ್ದಾರೆ. ಮಳೆ ಇಲ್ಲದೆ ಪರಿತಪಿಸುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಮತ್ತೊಂದೆಡೆ ಬಾರೀ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.