Friday, April 11, 2025
Google search engine

Homeಅಪರಾಧಇಡಿ, ಆರ್​​ಬಿಐ ಹೆಸರು ಬಳಸಿ ಕೋಟ್ಯಾಂತರ ಹಣ ವಂಚನೆ:ಏಳು ಜನರ ಬಂಧನ

ಇಡಿ, ಆರ್​​ಬಿಐ ಹೆಸರು ಬಳಸಿ ಕೋಟ್ಯಾಂತರ ಹಣ ವಂಚನೆ:ಏಳು ಜನರ ಬಂಧನ

ಬೆಂಗಳೂರು: ಜಾರಿ ನಿರ್ದೇಶನಾಲಯ ಮತ್ತು ಆರ್​ಬಿಐ ಹೆಸರು ಹೇಳಿ ಹಣ ದುಪಟ್ಟು ಮಾಡಿಕೊಡುತ್ತೇವೆ ಅಂತ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಮಹಿಳೆ ಸೇರಿದಂತೆ ಏಳು ಜನರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚನ್ನರಾಯಪಟ್ಟಣ ಮೂಲದ ಆರೋಪಿ ಕಲ್ಪನಾ (47) ಸೇರಿದಂತೆ ಏಳು ಜನರ ಬಂಧನವಾಗಿದೆ.

ನಿವೃತ್ತ ಬ್ಯಾಂಕ್​ ಮ್ಯಾನೇಜರ್​ ನಾಗೇಶ್ವರ ರಾವ್ ಹಾಗೂ ಸುಜರಿತ ಎಂಬುವರು ತಮ್ಮ ಸಂಬಂಧಿಕರಾದ ಮಾಲಾ ಮತ್ತು ರಮೇಶ್​ (ಹೆಸರು ಬದಲಾಯಿಸಲಾಗಿದೆ) ಎಂಬುವರನ್ನು ಕೊರೊನಾ ಸಮಯದಲ್ಲಿ ಕಲ್ಪನಾಗೆ ಪರಿಚಯಿಸುತ್ತಾರೆ. ನಂತರ ಕಲ್ಪನಾ ಕುಡುಮುಡಿ ಎಂಬಲ್ಲಿ 100 ಕೋಟಿ ಆಸ್ತಿ ಇದೆ, ಕೋರ್ಟಿನಲ್ಲಿ ಕೇಸ್ ನಮ್ಮ ಪರವಾಗಿ ಆಗಿದೆ. ದಾಖಲೆಗಳನ್ನು ತೆಗೆದುಕೊಳ್ಳಲು ನನಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ತುರ್ತಾಗಿ 15 ಲಕ್ಷ ಬೇಕು ಶೇಕಡ 3ರಷ್ಟು ಬಡ್ಡಿ ಸೇರಿಸಿ 15 ದಿನಗಳ ಒಳಗಡೆ ಹಣ ವಾಪಸ್ ಕೊಡುತ್ತೇನೆಂದು ಮಾಲಾ ಮತ್ತು ರಮೇಶ್​ಗೆ ಹೇಳಿದ್ದಾಳೆ.

ಮಾಲಾ ಮತ್ತು ರಮೇಶ್ ಸಂಬಂಧಿಯಾದ ನಾಗೇಶ್ವರ ರಾವ್ ಹಾಗೂ ಸುಜರಿತ, ಹಾಗೂ ಡ್ರೈವರ್ ಮಂಜುರವರ ಸಮಕ್ಷಮ ಹಣ ಪಡೆದುಕೊಂಡಿದ್ದಾಳೆ. ನಂತರ ಮಾಲಾ ಮತ್ತು ರಮೇಶ್ 15 ದಿನಗಳ ನಂತರ ಕಲ್ಪನಾಗೆ ಹಣ ಕೇಳಿದ್ದಾರೆ. ಆಗ ಕಲ್ಪನಾ ನಾವು ಕಪ್ಪು ಹಣವನ್ನು ಕಾನೂನು ಬದ್ಧ ಹಣವನ್ನಾಗಿ ಪರಿವರ್ತಿಸಲು ನೂರು ಕೋಟಿ ರೂಗಳಿಗೆ ಶೇ 30ರಂತೆ 30 ಕೋಟಿ ರೂಗಳನ್ನು ಕಟ್ಟಬೇಕು, ನೀವು ನಮಗೆ ಕೊಟ್ಟಿರುವ ಹಣಕ್ಕೆ, ಅದರ ಹತ್ತು ಪಟ್ಟು ಹಣವನ್ನು ಹೆಚ್ಚುವರಿ ಕೊಡುತ್ತೇನೆ ಮತ್ತು 2 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ವಿಗ್ರಹಗಳನ್ನು ನಿಮಗೆ ಕೊಡುತ್ತೇನೆ. ಆರ್​ಬಿಐ ಉನ್ನತ ಅಧಿಕಾರಿಗಳು ನಮ್ಮ ಜೊತೆ ಇರುತ್ತಾರೆ, ಅಲ್ಲದೆ ವರುಣ್ ಎಂಬುವವನು ಇಡಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆಂದು ನಂಬಿಸಿದ್ದಾಳೆ.

ಗೋಡೌನ್​ನಲ್ಲಿರುವ ಹಣದ ಕಂತೆಗಳಿಗೆ ಔಷದಿ ಹಾಕಬೇಕು ಇಲ್ಲದಿದ್ದರೆ ಹಣವು ಒಂದಕ್ಕೊಂದು ಅಂಟಿಕೊಂಡು ನಾಶವಾಗುತ್ತದೆ. ಹಣವನ್ನು ಈಗಲೇ ಕೊಟ್ಟರೆ 2-3 ದಿನಗಳಲ್ಲಿ ನಿಮಗೆ ಹತ್ತು ಪಟ್ಟು ಹೆಚ್ಚಿನ ಹಣ ಕೊಡುತ್ತೇವೆಂದು ಹೇಳಿ ಪರಿಪರಿಯಾಗಿ ನಂಬಿಸಿದ್ದಾಳೆ.

ಇವಳ ಮಾತನ್ನು ನಂಬಿದ ಮಾಲಾ ಮತ್ತು ರಮೇಶ್ ಒಟ್ಟು 4 ಕೋಟಿ ರೂ. ಹಣವನ್ನು ವಿವಿಧ ದಿನಾಂಕಗಳಂದು ನಾಗೇಶ್ವರ ರಾವ್ ಹೆಂಡತಿ ಸುಜರಿತ, ಕಲ್ಪನಾ, ದಿಲೀಪ್, ತರುಣ, ಗೌತಮ್, ಚಾಲಕ ಮಂಜು ಅವರಿಗೆ ನೀಡಿದ್ದಾರೆ. ನಂತರ ಮಾಲಾ ಮತ್ತು ರಮೇಶ್ ಹಣವನ್ನು ವಾಪಸ್ ಕೇಳಿದಾಗ ನಾವು ಹಣವನ್ನು ಕೊಡುವುದಿಲ್ಲ. ನೀವು ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ

ಪ್ರಕರಣ ಸಂಬಂಧ ಉತ್ತರ ವಿಭಾಗ ಡಿಸಿಪಿ ಸೈದುಲ್ಲಾ ಅಡಾವತ್ ಮಾತನಾಡಿ, ಆರೋಪಿಗಳು ಆರ್​ಬಿಐ ಮತ್ತು ಇಡಿ ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಆರ್​ಬಿಐ, ಇಡಿ ಬಳಿ ಜಪ್ತಿಯಾಗಿರುವ ಹಣವಿದೆ. ಈ ಹಣ ನಿಮಗೆ ಮರಳಿ ಬರಲಿದೆ. ಆದರೆ ನೀವು ಮೊದಲು ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿದ ಹಣಕ್ಕಿಂತ ಡಬಲ್, ತ್ರಿಬಲ್ ಹಣ ಕೊಡುತ್ತೇವೆ, ಜಮೀನು ಕೊಡಿಸುತ್ತೇವೆ ಎಂದು ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ. ಪ್ರಕರಣ ಸಂಬಂಧ ಏಳು ಆರೋಪಿಗಳ ಬಂಧಿಸಲಾಗಿದೆ. ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular