ಮೈಸೂರು ಜಿಲ್ಲಾ ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ
ಮೈಸೂರು: ಕಳೆದ ಹಲವು ದಿನಗಳಿಂದ ಮೈಸೂರು ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ೬ ಸುಲಿಗೆ, ೬ ಸರಗಳ್ಳತನ, ೨೫ ಮನೆ ಕಳ್ಳತನ, ೬ ಮನೆ ಕೆಲಸದವರೇ ಕಳವು, ೬೭ ವಾಹನ ಕಳ್ಳತನ, ೧೫ ಸಾಮಾನ್ಯ ಕಳ್ಳತನ, ೫ ಜಾನುವಾರು ಕಳ್ಳತನ ಮತ್ತು ೪ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು ರೂ. ೨ ಕೋಟಿ ೬ ಲಕ್ಷದ ೮೫,೫೦೪ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಶಕ್ಕೆ ಪಡೆದ ಮಾಲುಗಳ ವಿವರ ಚಿನ್ನ, ಬೆಳ್ಳಿ, ಒಡವೆಗಳು : ಒಟ್ಟು ೩೫ ಪ್ರಕರಣಗಳಲ್ಲಿ ೧ ಕೋಟಿ ಮೌಲ್ಯದ ೧ಲಕ್ಷದ ೫೫,೨೧೯ ರೂ.ಗಳ ೨ ಕೆ.ಜಿ ೪೩೯ ಗ್ರಾಂ ೬೦೦ ಮಿಲಿ ಗ್ರಾಂ ಚಿನ್ನ ಮತ್ತು ೪ಕೆ.ಜಿ. ೩೬೦ ಗ್ರಾಂ ಬೆಳ್ಳಿ, ಒಟ್ಟು ೧೮ ಪ್ರಕರಣಗಳಲ್ಲಿ ೪೨ ಲಕ್ಷದ ೩೬,೫೮೫ ರೂ ನಗದು ವಶಪಡಿಸಿಕೊಂಡಿದ್ದಾರೆ.
ಒಟ್ಟು ೬೭ ಪ್ರಕರಣಗಳಲ್ಲಿ ೫೨ ಲಕ್ಷ ೧೨, ೬೨೦ ರೂ. ಮೌಲ್ಯದ ೫ ಕಾರು, ೩ ಆಟೋ, ೨ ಟ್ರಾಕ್ಟರ್, ೩ ಟಿಪ್ಪರ್, ೩ ರೋಡ್ ರೋಲರ್ ಮತ್ತು ೬೨ ಮೊಟಾರ್ ಬೈಕ್, ೬೨ ವಾಹನಗಳನ್ನು ವಶಪಡಿಸಿಕೊಂಡಿದ್ದು, ೮ ಪ್ರಕರಣಗಳಲ್ಲಿ ೩ ಲಕ್ಷದ ೫೪,೦೦೦ ದ ಮೋಟಾರ್ ಪಂಪ್, ಬ್ಯಾಟರಿ, ಲ್ಯಾಪ್‌ಟಾಪ್, ಟ್ಯಾಬ್, ಹಾರ್ಡ್ ಡಿಸ್ಕ್, ಮೊಬೈಲ್ ಹಾಗೂ ಇತರೇ ವಸ್ತುಗಳು ಮತ್ತು ೪ ಪ್ರಕರಣಗಳಲ್ಲಿ ಅಂದಾಜು ೨ ಲಕ್ಷದ ೯೫ ಸಾವಿರ ಮೌಲ್ಯದ ೬ ಹಸುಗಳು ಮತ್ತು ೩ ಕುರಿಗಳನ್ನು ೯ ಪ್ರಕರಣಗಳಲ್ಲಿ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಆದೇಶದ ಮೇರೆಗೆ ವಾರಸುದಾರರಿಗೆ ನೀಡಿದ್ದಾರೆ.

೯೦ ಮೊಬೈಲ್ ಹಿಂದಕ್ಕೆ: ೧೩ಲಕ್ಷ ೫೦ ಸಾವಿರ ರೂ. ಮೌಲ್ಯದ ಒಟ್ಟು ೯೦ ಮೊಬೈಲ್ ಪ್ರಕರಣವನ್ನು ಭೇದಿಸಿ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಎನ್.ವಿಷ್ಣುವರ್ಧನ ಮಾತನಾಡಿ, ೨೦೨೩ರ ಜುಲೈನಿಂದ ಈವರೆಗೆ ನಡೆದ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಇಂದು ಮಾಲೀಕರಿಗೆ ಆಯಾ ವಸ್ತುಗಳನ್ನು ಹಿಂದಿರುಗಿಸಲಾಗುತ್ತಿದೆ. ಉಳಿದವು ಕೆಲವು ತನಿಖೆ ಹಂತದಲ್ಲಿದ್ದರೆ, ಮತ್ತೆ ಕೆಲವು ನ್ಯಾಯಾಲಯದ ಹಂತದಲ್ಲಿದೆ. ಪೊಲೀಸರಿಂದಲೂ ಅನೇಕ ಪ್ರಕರಣಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ತನಿಖೆ ಬಳಿಕ ಮಾಹಿತಿ: ನಂಜನಗೂಡಿನಲ್ಲಿ ೨೦೨೪ ರಲ್ಲಿ ರಸ್ತೆ ದರೋಡೆ ಪ್ರಕರಣ ನಡೆದಿತ್ತು. ಅದಾದ ಬಳಿಕ ಕಳೆದ ವರ್ಷ ಎನೂ ನಡೆದಿರಲಿಲ್ಲ. ಈಗ ಕೆಲ ದಿನಗಳ ಹಿಂದೆ ಜಯಪುರದಲ್ಲಿ ಪ್ರಕರಣ ನಡೆದು ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಎರಡು ಪ್ರಕರಣಗಳಿಗೂ ಸಾಮಿಪ್ಯವಿದೆಯೇ ಅಥವಾ ಅಂತರಾಜ್ಯ ಕಳ್ಳರ ಕೈ ಚಳಕವಿದೆಯೇ ಎಂಬ ಪ್ರಶ್ನೆಗೆ ಸದ್ಯ ತನಿಖಾ ಹಂತದಲ್ಲಿದೆ. ತನಿಖೆ ಪೂರ್ಣಗೊಂಡ ಬಳಿಕ ಪೂರ್ಣ ಮಾಹಿತಿ ನೀಡುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಸ್ಥಳೀಯರ ಪಬ್ಲಿಕ್ ಸೇಫ್ಡ್ ಆಕ್ಟ್ ಅಡಿಯಲ್ಲಿ ೨೮೦೦ಕ್ಕೂ ಹೆಚ್ಚು ಸಿಸಿಟಿವಿಗಳಿವೆ. ಇಲಾಖೆಯಿಂದ ೧೦೦೬ ಸಿಸಿಟಿವಿಗಳನ್ನು ಕಣ್ಗಾವಲಿಗೆ ಇರಿಸಲಾಗಿದ್ದು, ಅವುಗಳಿಂದ ಕಳವು ಪ್ರಕರಣ ಬೇಧಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಸದರಿ ಪ್ರಕರಣದ ತನಿಖೆ ಹಾಗೂ ಹಿಂದಿರುಗಿಸುವ ಪ್ರಕರಣದಲ್ಲಿ ಅಪರ ಪೊಲೀಸ್ ಅಧೀಕ್ಷಕ ಸಿ.ಮಲ್ಲಿಕ್, ಕೆ.ಎಸ್.ಪಿ.ಎಸ್ ನ ಎಲ್. ನಾಗೇಶ್, ಕೆ.ಎಸ್.ಪಿ.ಎಸ್. ಹಾಗೂ ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕರೀಂ ರಾವತರ್, ನಂಜನಗೂಡು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಜಿ.ಎಸ್.ರಘು, ಹುಣಸೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ, ಸಿ.ಇ.ಎನ್ ಕೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಎನ್.ರಘು ಮೊದಲಾದವರ ತಂಡದಲ್ಲಿ ಉಪಸ್ಥಿತರಿದ್ದರು
ಹೊಸ ಬದುಕು ನೀಡಿದ ಪೊಲೀಸರು
ಕಳೆದ ೬ ತಿಂಗಳ ಹಿಂದೆ ಹುಣಸೂರಿನಲ್ಲಿ ನನ್ನ ಜೀವನಾಧಾರವಾಗಿದ್ದ ಕಾರನ್ನು ಬಾಡಿಗೆಗೆ ಪಡೆದಿದ್ದ ದುಷ್ಕರ್ಮಿಗಳು, ಬೆಟ್ಟದಪುರ ಬಳಿ ನನಗೆ ಹೊಡೆದು ಕಾರು ಕದ್ದೊಯ್ದರು. ಈ ಬಗ್ಗೆ ದೂರು ನೀಡಿದ್ದೆ. ಪೊಲೀಸರು ನನ್ನ ಕಾರು ಪತ್ತೆ ಹಚ್ಚಿ ನನಗೆ ವಾಪಸ್ ಕೊಡಿಸುವ ಮೂಲಕ ನನಗೆ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಪೊಲೀಸರ ಬಗ್ಗೆ ನನ್ನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ.
-ನಾಸಿರ್ ಖಾನ್, ಕಾರು ಚಾಲಕ ಹುಣಸೂರು.

ಎರಡು ವರ್ಷದಲ್ಲಿ ೩೯೮ ಮನೆ ಕಳುವು: ಮೈಸೂರು ಜಿಲ್ಲೆಯಲ್ಲಿ ಅಂದಾಜು ಕಳೆದೆರಡು ವರ್ಷದಲ್ಲಿ ೨೦೨೩ರ ಜುಲೈನಿಂದ ೨೦೨೫ರ ಜನವರಿವರೆಗೆ ಒಟ್ಟು ೧೨೭೯ ಪ್ರಕರಣಗಳು ದಾಖಲಾಗಿ ೨೮ ಕೋಟಿ ೭೨ಲಕ್ಷದ ೨೨,೦೦೧ ರೂ ಮೌಲ್ಯದ ಮಾಲು ಕಳವಾಗಿದ್ದವು. ಈ ಪೈಕಿ ೩೯೮ ಮನೆ ಕಳವು ಪ್ರಕರಣಗಳೇ ಹೆಚ್ಚಾಗಿ ನಡೆದಿದ್ದು, ಕೇವಲ ೬೩ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದು, ಉಳಿದವು ಇನ್ನೂ ತನಿಖಾ ಹಂತದಲ್ಲಿವೆ. ಈ ಪೈಕಿ ಒಟ್ಟು ೨೫೫ ಪ್ರಕರಣದ ಮಾಲುಗಳನ್ನು ವಶಕ್ಕೆ ಪಡೆದು ೩ಕೋಟಿ ೯೬ಲಕ್ಷದ ೧೭,೨೩೮ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ೧೩೪ ಪ್ರಕರಣಗಳ ೨ಕೋಟಿ ೬ ಲಕ್ಷ ೮೫೫೦೪ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.