ಮೈಸೂರು: ವರುಣಾ ಕ್ಷೇತ್ರದ ಮೈಸೂರು ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ೭ ಕೋಟಿ ರೂ. ವೆಚ್ಚದಲ್ಲಿ ಸಿ.ಎಸ್.ಆರ್. ಫಂಡ್‌ನಿಂದ ಮಾಡಲಾಗುತ್ತಿದೆ ಎಂದು ನೂತನ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಯುನೈಟೆಡ್ ವೇ ವತಿಯಿಂದ ನಿರ್ಮಿಸುತ್ತಿರುವ ಶಾಲಾ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ವರುಣಾ, ವರುಕೋಡು, ದೇವಲಾಪುರ, ಹಡಜನ, ಸೋಮೇಶ್ವರಪುರ, ಹಾರೋಹಳ್ಳಿ, ಯಡಕೊಳ, ಮೊಸಂಬಾಯನಹಳ್ಳಿ, ಸಿದ್ದರಾಮನಹುಂಡಿ, ಜಂತಗಳ್ಳಿ ಗ್ರಾಮಗಳಲ್ಲಿ ಸಿ.ಎಸ್.ಆರ್. ಫಂಡ್‌ನಿಂದ ನೂತನ ಕಟ್ಟಡಗಳು, ಶೌಚಾಲಯ, ಕಾಂಪೌಂಡ್, ಮೈದಾನ ಹೀಗೆ ಶಾಲೆಗಳ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ವಿಶೇಷವಾಗಿ ವರುಣಾ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕ್ಷೇತ್ರವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ ೩೦ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದೇವೆ.
ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಇಂಗ್ಲೀಷ್ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ವರುಣಾ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಕಂಪನಿಗಳು ಸಿ.ಎಸ್.ಆರ್. ಫಂಡ್ ನೀಡಲು ಮುಂದೆ ಬರುತ್ತಿವೆ. ಇದಕ್ಕೆ ನಾವು ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇವೆ. ಎಲ್ಲಾ ಕಂಪನಿಗಳ ಸಿ.ಇ.ಓ.ಗಳಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆ. ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದ ಅವರು ಪ್ರೌಢಶಾಲಾ ವಿದ್ಯಾರ್ಥಿಗಳ ನೂತನ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್, ಗ್ರಾ.ಪಂ. ಅಧ್ಯಕ್ಷ ಗೌರಮ್ಮ, ಬಿಇಒ ವಿವೇಕಾನಂದ, ಬಿಆರ್‌ಸಿ ಮಹಾದೇವ, ಯುನೈಟೆಡ್ ವೇನ ಸಿಇಓ ರಾಜೇಶ್ ಕೃಷ್ಣನ್, ಭಾಗ್ಯ, ಮುಖಂಡರಾದ ರಮೇಶ್ ಮುದ್ದೇಗೌಡ, ದೇವಯ್ಯ, ಮಹೇಂದ್ರ, ಮಂಜುಳ ಮಂಜುನಾಥ್, ಮಡೆ ಶಿವರಾಂ, ಅಹಿಂದ ಜವರಪ್ಪ, ಕೃಷ್ಣಮೂರ್ತಿ, ಆಪ್ತ ಸಹಾಯಕ ಶಿವಸ್ವಾಮಿ, ಪ್ರದೀಪ್‌ಕುಮಾರ್, ನಾಗರಾಜ್ ಹಾಜರಿದ್ದರು.