Monday, April 7, 2025
Google search engine

Homeಅಪರಾಧಕಾನೂನುಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಡಿವಾಣ: ಕೇರಳ ಹೈಕೋರ್ಟ್ ಸೂಚನೆ

ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಡಿವಾಣ: ಕೇರಳ ಹೈಕೋರ್ಟ್ ಸೂಚನೆ

ಕೇರಳ: ಆಗಾಗ್ಗೆ ಸಂಭವಿಸುವ ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ರಾಜ್ಯದ ಗಿರಿಧಾಮಗಳಲ್ಲಿ ಪ್ರವಾಸಿಗರ ಸಂಚಾರ ನಿರ್ಬಂಧಿಸಲು ಕೇರಳ ಹೈಕೋರ್ಟ್‌ ಶುಕ್ರವಾರ ಸೂಚಿಸಿದ್ದು ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗಾಗಿ ವ್ಯವಸ್ಥೆ ರೂಪಿಸುವ ಅಧಿಕಾರಿಗಳಿಗೆ ʼಧಾರಣಾ ಸಾಮರ್ಥ್ಯ ಅಂದಾಜುʼ ಮಾರ್ಗದರ್ಶನ ಒದಗಿಸಬೇಕು ಎಂದಿದೆ.

ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ವಿನಾಶಕಾರಿ ಭೂಕುಸಿತಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಲು ಈಚೆಗೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಮೊಕದ್ದಮೆಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ ಮತ್ತು ಅವೈಜ್ಞಾನಿಕ ಮೂಲಸೌಕರ್ಯ ಅಭಿವೃದ್ಧಿಯಿಂದ ರಮಣೀಯ ಸೌಂದರ್ಯಕ್ಕೆ ಜನಪ್ರಿಯವಾಗಿರುವ ಕೇರಳದ ಗಿರಿಧಾಮಗಳು ಗಂಭೀರ ಅಪಾಯ ಎದುರಿಸುತ್ತಿವೆ ಎಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್‌ ನಂಬಿಯಾರ್‌ ಮತ್ತು ಶ್ಯಾಮ್‌ ಕುಮಾರ್‌‌ ವಿ ಎಂ ಅವರಿದ್ದ ಪೀಠ ತಿಳಿಸಿತು.

ಜನದಟ್ಟಣೆ, ಅಸಮರ್ಪಕ ಮೂಲಸೌಕರ್ಯ, ಭಾರೀ ವಾಹನ ಸಂಚಾರ ಅಲ್ಲದೆ ಪರಿಸರ ಒತ್ತಡದಂತಹ ಸಮಸ್ಯೆಗಳು ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಿಗೆ ಗಮನಾರ್ಹ ಸಮಸ್ಯೆ ಉಂಟುಮಾಡುತ್ತವೆ ಎಂದು ಅದು ಒತ್ತಿಹೇಳಿದೆ.

ಹೀಗಾಗಿ ಕೇರಳ ಗಿರಿಧಾಮಗಳ ಧಾರಣಾ ಸಾಮರ್ಥ್ಯ ಅಂದಾಜು ಮಾಡುವುದು ಹಾಗೂ ವಾಹನಗಳು ಮತ್ತು ಸಂದರ್ಶಕರಿಗೆ ಕಡಿವಾಣ ಹಾಕುವುದು ಎಲ್ಲರ ಹಿತದೃಷ್ಟಿಯಿಂದ ಉತ್ತಮ ಎಂದು ನ್ಯಾಯಾಲಯ ನುಡಿದಿದೆ. ಈ ಸಂಬಂಧ ಆಯಾ ಜಿಲ್ಲಾಡಳಿತಗಳಲ್ಲಿ ಲಭ್ಯವಿರುವ ವಿವರ ಬಳಸಿಕೊಂಡು ಧಾರಣಾ ಸಾಮರ್ಥ್ಯ ಅಂದಾಜು ಮಾಡುವಂತೆ ಅದು ಸೂಚಿಸಿದೆ.

ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಹೀಗಿವೆ:

ಅತಿಹೆಚ್ಚು ದಟ್ಟಣೆ ಮತ್ತು ದಟ್ಟಣೆ ಇಲ್ಲದ ಋತುಗಳಲ್ಲಿ ಪ್ರವಾಸಿಗರ ಸಂಖ್ಯೆಯ ಮೌಲ್ಯಮಾಪನ.

ಅತಿಹೆಚ್ಚು ದಟ್ಟಣೆ ಮತ್ತು ದಟ್ಟಣೆ ಇಲ್ಲದ ಋತುಗಳಲ್ಲಿ ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ರೀತಿಯ ವಾಹನಗಳ ಸಂಖ್ಯೆಯ ವಿಶ್ಲೇಷಣೆ.

ಪಾರ್ಕಿಂಗ್‌ ಸೇರಿದಂತೆ ಕಾನೂನುಬದ್ಧ ಮೂಲಸೌಕರ್ಯಗಳು ವಸತಿ ಸೌಲಭ್ಯಗಳಿಗೆ ಅನುಗುಣವಾಗಿ ಇವೆಯೇ ಎಂಬುದನ್ನು ನಿರ್ಧರಿಸಬೇಕು.

ಸ್ಥಳೀಯ ಬಳಕೆಗೆ ಸಾಕಷ್ಟು ನೀರು ಲಭ್ಯವಿದೆಯೇ ಎಂಬುದನ್ನು ಲೆಕ್ಕಹಾಕಿ ಜಲ ಸಂರಕ್ಷಣೆ ಕಾರ್ಯ ನಡೆಯಬೇಕು. ನಂತರ ಪ್ರವಾಸಿ ಸೌಲಭ್ಯಗಳಿಗೆ ಲಭ್ಯ ಇರುವ ನೀರಿನ ಕುರಿತು ನಿರ್ಧರಿಸಬೇಕು.

ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ.

ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳ ಲಭ್ಯತೆ ಮತ್ತು ಸಾಮರ್ಥ್ಯ.

ವಿವಿಧ ಜಿಲ್ಲೆಗಳ ಸಂರಕ್ಷಿತ ಅರಣ್ಯ ಪ್ರದೇಶಗಳು ಮತ್ತು ಮೀಸಲು ಅರಣ್ಯಗಳನ್ನು ಲೆಕ್ಕಹಾಕಿ ಅವುಗಳ ಧಾರಣಾ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಬೇಕು. ಏಕೆಂದರೆ ಪ್ರವಾಸಿಗರಿಂದಾಗಿ ಉಂಟಾಗುವ ಮಾಲಿನ್ಯ ಮತ್ತು ತ್ಯಾಜ್ಯವನ್ನು ಕಾಡು ಮತ್ತು ವನ್ಯಜೀವಿಗಳು ಹೆಚ್ಚು ತಾಳಿಕೊಳ್ಳಲಾರವು.

ಜನಪ್ರಿಯ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಿ ಪ್ರತಿ ಸ್ಥಳದ ವೈಯಕ್ತಿಕ ಭೌತಿಕ ಧಾರಣಾ ಸಾಮರ್ಥ್ಯ ಕುರಿತು ಅಂದಾಜಿಸಬೇಕು.

ಈ ಹಿನ್ನೆಲೆಯಲ್ಲಿ, ಅಗತ್ಯ ದತ್ತಾಂಶ ಇಲ್ಲವೇ ವಿವರಗಳು ಅಥವಾ ಅಂಕಿಅಂಶಗಳನ್ನು ಪಡೆಯಲು ಆಯಾ ಜಿಲ್ಲಾಡಳಿತಗಳಿಗೆ ಕೂಡಲೇ ಆದೇಶ ಹೊರಡಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ

RELATED ARTICLES
- Advertisment -
Google search engine

Most Popular