Wednesday, April 16, 2025
Google search engine

Homeರಾಜ್ಯಇಂದಿನಿಂದ ಜುಲೈ ೩೧ ರವರೆಗೆ ತಮಿಳುನಾಡಿಗೆ ೧ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ

ಇಂದಿನಿಂದ ಜುಲೈ ೩೧ ರವರೆಗೆ ತಮಿಳುನಾಡಿಗೆ ೧ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ

ನವದೆಹಲಿ: ಜುಲೈ ೧೨ ರಿಂದ ೩೧ ರವರೆಗೆ ಪ್ರತಿನಿತ್ಯ ೧ ಟಿಎಂಸಿ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಕರ್ನಾಟಕ ರಾಜ್ಯಕ್ಕೆ ಸೂಚನೆ ನೀಡಿದೆ.

ಕಳೆದ ವರ್ಷ ತೀವ್ರ ಬರಗಾಲದಿಂದ ಡೆಡ್ ಸ್ಟೋರೇಜ್ ತಲುಪಿದ್ದ ಕೆಆರ್‌ಎಸ್‌ಗೆ ಈ ಬಾರಿ ಉತ್ತಮ ಮಳೆಯಿಂದ ನೀರು ಹರಿದು ಬರುತ್ತಿದ್ದು, ಈ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಇದರ ಬೆನ್ನಲ್ಲೆ ದೆಹಲಿಯಲ್ಲಿ ನಡೆದ ಸಿಡಬ್ಲ್ಯೂಆರ್‌ಸಿ ೯೯ನೇ ಸಭೆಯಲ್ಲಿ, ಜುಲೈ ೧೨ ರಿಂದ ಜುಲೈ ೩೧ರ ವರೆಗೆ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವನ್ನು ದಿನಕ್ಕೆ ೧ ಟಿಎಂಸಿ (ಸರಾಸರಿ ೧೧,೫೦೦ ಕ್ಯುಸೆಕ್ಸ್ ಹರಿವು) ಇರುವಂತೆ ಕರ್ನಾಟಕವು ತನ್ನ ಜಲಾಶಯಗಳಿಂದ ನೀರಿನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಕಳೆದ ಜಲವರ್ಷದಲ್ಲಿ ಕರ್ನಾಟಕ ನೀರು ಸರಿಯಾಗಿ ಹರಿಸಿಲ್ಲ. ಪ್ರಸಕ್ತ ಜಲವರ್ಷದಲ್ಲಿ ಮಾನ್ಸೂನ್ ಸಾಮಾನ್ಯವಾಗಿದೆ. ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಹರಿಸುವಂತೆ ಶಿಫಾರಸು ಮಾಡಿ ಎಂದು ತಮಿಳುನಾಡು ಪರ ಅಧಿಕಾರಿಗಳು ಸಿಡಬ್ಲ್ಯೂಆರ್‌ಸಿಗೆ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಕರ್ನಾಟಕ ಸಹ ಕಾವೇರಿಯಲ್ಲಿ ನೀರಿನ ಕೊರತೆ ಇದೆ. ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, ಶೇ,೨೮ ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ನೀರು ಬಿಡಲು ಆಗುವುದಿಲ್ಲ ಎಂದು ಕರ್ನಾಟಕದ ಪರ ಅಧಿಕಾರಿಗಳು ವಾದ ಮಂಡಿಸಿದ್ದರು.

ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆಯು ೫೮.೬೬೮ ಟಿಎಂಸಿ ಇದ್ದು, ಮೆಟ್ಟೂರಿನಿಂದ ೪.೯೦೫ ಟಿಎಂಸಿ ಮತ್ತು ಭವಾನಿಯಿಂದ ೦.೬೧೮ ಟಿಎಂಸಿ (ಒಟ್ಟು ೫.೫೪೨ ಟಿಎಂಸಿ) ನೀರು ನದಿಗೆ ಬಿಡುಗಡೆ ಮಾಡಿರುವುದಲ್ಲದೆ ತಮಿಳುನಾಡಿನ ಮೂರು ಜಲಾಶಯಗಳಲ್ಲಿ ೨೪.೭೦೫ ಟಿಎಂಸಿ ನೀರು ಇದೆ ಎಂದು ರಾಜ್ಯದ ಪರ ಅಧಿಕಾರಿಗಳು ವಿವರಣೆ ನೀಡಿದರು. ಎರಡೂ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ ಸಿಡಬ್ಲ್ಯೂಆರ್‌ಸಿ ಪ್ರತಿನಿತ್ಯ ೧ ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.

RELATED ARTICLES
- Advertisment -
Google search engine

Most Popular