ಬೆಂಗಳೂರು: ಫೆಂಗಲ್ ಚಂಡಮಾರುತವು ತಮಿಳುನಾಡು ಕರಾವಳಿಗೆ ಶನಿವಾರ ಅಪ್ಪಳಿಸಿತ್ತು. ಇದೀಗ ಮುಂದಿನ ೨೪ ಗಂಟೆಗಳಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಚಿತ್ತೂರು, ಕೊಡೂರು, ತಿರುಪತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಕರ್ನಾಟಕದ ಕೊಡಗು, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ತಿರುಮಲದಲ್ಲಿ ಶುಕ್ರವಾರ ಬೆಳಗ್ಗೆ ಆರಂಭವಾದ ಮಳೆ ಇಂದೂ ಮುಂದುವರೆದಿದೆ. ರಾಯಲ್‌ಸೀಮಾ, ಕಡಲೂರು ಸೇರಿದಂತೆ ಹಲವೆಡೆ ಹೆಚ್ಚಿನ ಮಳೆಯಾಗಲಿದೆ. ಇಡೀ ತಿರುಮಲ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಬೆಟ್ಟದ ತಾಪಮಾನದಲ್ಲಿ ಭಾರೀ ಇಳಿಕೆ ಉಂಟಾಗಿದೆ. ಪಟ್ಟಣದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ.
ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದಾದ್ಯಂತ ಕೆಲವು ಸ್ಥಳಗಳಲ್ಲಿ ಭಾರೀ ಮಳೆ ಸುರಿಯುತ್ತದೆ. ತಿರುಪತಿ, ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಗಳ ಕರಾವಳಿಯಲ್ಲಿ ಗಂಟೆಗೆ ೭೦-೯೦ ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಜೊತೆಗೆ ನೆಲ್ಲೂರು, ಚಿತ್ತೂರು, ಕಡಪ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಉಂಟಾಗುವ ಆಂತಕ ಇದೆ.
ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳಲ್ಲಿ ನೀರು ನಿಂತಿದೆ. ಹೀಗಾಗಿ ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಮಳೆ ನೀರು ವಸತಿ ಪ್ರದೇಶಗಳು, ಆಸ್ಪತ್ರೆಗಳಿಗೆ ನುಗ್ಗಿದ್ದು, ಜನರಿಗೆ ತೊಂದರೆಯಾಗಿದೆ. ಇನ್ನು ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ನಗರಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.