ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ ನಗರದ ಡೈರಿ ಸರ್ಕಲ್ ಬಳಿಯ ಮಹಾಲಿಂಗೇಶ್ ಬಡಾವಣೆಯ ಪೋಲಮಸ್ ಹೋಟೆಲ್‌ನಲ್ಲಿ ಇಂದು ಬೆಳಿಗ್ಗೆ ೯ ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಹೋಟೆಲ್ ಶೆಟರ್ ಮುಂದೆ ಮಲಗಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ರವಿ(೪೫) ಮೃತ ದುರ್ದೈವಿ. ಹೋಟೆಲ್‌ನಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೊದಲ ಮಹಡಿಯಲ್ಲಿರುವ ಪೋಲಮಸ್ ಹೋಟೆಲ್‌ನಲ್ಲಿದ್ದ ಕಮರ್ಷಿಯಲ್ ಸಿಲಿಂಡರ್ ಬ್ಲಾಸ್ಟ್ ಆಗಿದ್ದು ಬ್ಲಾಸ್ಟ್ ತೀವ್ರತೆಗೆ ಹೋಟೆಲ್ ರೋಲಿಂಗ್ ಶೆಟರ್ ಮುಂದೆ ಮಲಗಿದ್ದ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸದ್ಯ ಸ್ಥಳಕ್ಕೆ ಆಡುಗೋಡಿ ಪೊಲೀಸರು, ಅಗ್ನಿಶಾಮಕ ದಳ ಭೇಟಿ ನೀಡಿ ಹೋಟೆಲ್‌ನಲ್ಲಿ ಬೆಂಕಿ ನಂದಿಸಿದ್ದಾರೆ.
ಇನ್ನು ಹೋಟೆಲ್‌ನ ಕೆಳ ಮಹಡಿಯಲ್ಲಿ ಸಿಲಿಂಡರ್‌ಗಳನ್ನ ಇಡಲಾಗುತ್ತಿತ್ತು. ಒಳ ಭಾಗದಲ್ಲಿ ಒಟ್ಟು ೧೦ ಕಮರ್ಷಿಯಲ್ ಸಿಲಿಂಡರ್‌ಗಳನ್ನ ಇಡಲಾಗಿತ್ತು. ಇಂದು ಬೆಳಿಗ್ಗೆ ಎಂದಿನಂತೆ ಎದ್ದು ಹೋಟೆಲ್ ತೆಗೆದು ಅಡುಗೆ ಭಟ್ಟರು ಟಿಫನ್‌ಗೆ ರೆಡಿ ಮಾಡಿಕೊಳ್ಳುತ್ತಿದ್ದರು. ಮೊದಲ ಮಹಡಿಯಲ್ಲಿ ಅಡುಗೆ ಮಾಡುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮೊದಲ ಮಹಡಿಯಲ್ಲಿದ್ದ ನಾಗರಾಜ್ ಹಾಗೂ ರಾಮಯ್ಯ ಚೋರ್ಲಾ ಮೂಲತಃ ಅಸ್ಸಾಂನವರು. ಮತ್ತೊಂದೆಡೆ ಸಿಲಿಂಡರ್ ಇಟ್ಟ ಜಾಗದಲ್ಲಿ ಮಲಗಿದ್ದ ರವಿ (೪೫) ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಒಂದು ಸಿಲಿಂಡರ್ ಬ್ಲಾಸ್ಟ್ ಆಗಿದ್ದು ಅದೃಷ್ಟವಶಾತ್ ಉಳಿದ ಸಿಲಿಂಡರ್‌ಗಳು ಯಾವುದೇ ಹಾನಿಯಾಗಿಲ್ಲ.