ಸಾಲಿಗ್ರಾಮ: ಸಾಲಿಗ್ರಾಮ ಪಟ್ಟಣದಲ್ಲಿನ ತಾಲ್ಲೂಕು ಕಛೇರಿಯಲ್ಲಿ ಡಿ.ದೇವರಾಜ ಅರಸು ರವರ ಜಯಂತಿಯನ್ನು ಆಚರಿಸಲಾಯಿತು. ಡಿ.ದೇವರಾಜ ಅರಸುರವರು ನಾಡುಕಂಡಂತಹ ಧೀಮಂತನಾಯಕರು ಎಂದು ತಹಸೀಲ್ದಾರ್ ಕೆ.ಎನ್.ಮೋಹನ್ ಕುಮಾರ್ ಹೇಳಿದರು. ಅವರು ಪಟ್ಟಣದಲ್ಲಿನ ತಾಲ್ಲೂಕು ಕಛೇರಿಯಲ್ಲಿ ಡಿ.ದೇವರಾಜ ಅರಸು ರವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಇವರು ಒಂದು ವ್ಯಕ್ತಿಯಾಗದೆ ಅಗಾಧ ಶಕ್ತಿಯಾಗಿದ್ದರು. ದಲಿತರು, ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಸಮುದಾಯಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಇಂತಹ ಮಹಾನ್ ನಾಯಕರ ಜಯಂತಿಯನ್ನು ಎಲ್ಲರೂ ಸೇರಿ ಬಹಳ ಅರ್ಥಪೂರ್ಣವಾಗಿ ಆಚರಿಸುವುದು ಹಾಗೂ ಅವರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ಎಲ್ಲರೂ ಸಾಗುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದರು.
ದಸಂಸ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು ಮಾತನಾಡಿ ತಾಲ್ಲೂಕು ಆಡಳಿತದ ವತಿಯಿಂದ ನಡೆಸುತ್ತಿರುವ ಡಿ.ದೇವರಾಜ ಅರಸು ರವರ ಜಯಂತಿಯನ್ನು ನಿಗದಿತ ಸಮಯಕ್ಕಿಂತ ಸುಮಾರು ಒಂದುಕಾಲು ಗಂಟೆ ತಡವಾಗಿ ಮಾಡುವ ಮೂಲಕ ಎಲ್ಲಾ ಗಣ್ಯರು ಕಛೇರಿಯಲ್ಲಿ ಕಾಯುವಂತೆ ಮಾಡಿರುವುದು ಬೇಸರದ ಸಂಗತಿಯಾಗಿದೆ.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕಛೇರಿಯ ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಇಲಾಖೆಯ ಅಧಿಕಾರಿಗಳಾಗಲೀ, ನೌಕರರಾಗಲೀ, ಸಿಬ್ಬಂದಿಗಳಾಗಲೀ ಪಾಲ್ಗೊಂಡಿಲ್ಲ. ತಾಲೂಕು ಆಡಳಿತದ ವತಿಯಿಂದ ಮಾಡುವ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಎಲ್ಲರಿಗೂ ಮೊದಲೇ ಮಾಹಿತಿಯನ್ನು ನೀಡುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ತಾಲೂಕಿಗೆ ಖಾಯಂ ತಹಸೀಲ್ದಾರ್ ರವರನ್ನು ನೇಮಕ ಮಾಡುವ ಮೂಲಕ ಇಂತಹ ಗೊಂದಲಗಳು ಆಗದಂತೆ ತಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್, ಗ್ರಾ.ಪಂ.ಅಧ್ಯಕ್ಷೆ ಫಾತಿಮಾ ಉನ್ನಿಸಾ, ಮಾಜಿ ಅಧ್ಯಕ್ಷ ಎಸ್.ಆರ್.ಪ್ರಕಾಶ್, ಉಪಾಧ್ಯಕ್ಷೆ ಶಶಿಕಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.