ಮಂಗಳೂರು (ದಕ್ಷಿಣ ಕನ್ನಡ): ನೆರೆಯ ರಾಜ್ಯವಾಗಿರುವ ಕೇರಳದಲ್ಲಿ ಕಂಡು ಬಂದಿರುವ ಕೊರೋನ -19 ವೈರಸ್‌ನ ಜೆಎನ್-1 ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನಚ್ಚೆರಿಕೆ ವಹಿಸಲಾಗಿದ್ದು, ಜಿಲ್ಲೆಯ ಗಡಿಭಾಗದಲ್ಲಿ ತಪಾಸಣೆಗೆ ಐದು ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ.ಜಿಲ್ಲೆಯಲ್ಲಿ ಕೊರೋನ -19 ವೈರಸ್‌ನ ಉಪತಳಿ ಜೆಎನ್-1 ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.‘‘ಕೇರಳದ ಪವಿತ್ರ ಕ್ಷೇತ್ರ ಶಬರಿಮಲೈ ಯಾತ್ರಾರ್ಥಿಗಳಲ್ಲಿ ಕೋವಿಡ್ ರೋಗ ಲಕ್ಷಣಗಳು ಇದ್ದರೆ ಮಾತ್ರ ತಪಾಸಣೆ ನಡೆಸಲಾಗುತ್ತದೆ. ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ಶೀತ, ನೆಗಡಿ, ಜ್ವರ ಅನಾರೋಗ್ಯದ ಲಕ್ಷಣಗಳು ಇದ್ದರೆ ಅವರನ್ನು ತಪಾಸಣೆಗೆ ಒಳಪಡಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆಯಲಾಗುತ್ತದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 100 ರ್ಯಾಪಿಡ್ ಟೆಸ್ಟ್, 221 ಆರ್‌ಟಿಪಿಸಿಆರ್ ಟೆಸ್ಟ್ ಸೇರಿದಂತೆ ಒಟ್ಟು 321 ಜನರನ್ನು ತಪಾಸಣೆಗೆ ಒಳಪಡಿಸುವಂತೆ ಗುರಿ ನಿಗದಿಯಾಗಿದೆ. 100 ಕಿಟ್‌ಗಳನ್ನು ತಾಲೂಕು ಆಸ್ಪತ್ರೆಗಳಿಗೆ ಒದಗಿಸಲಾಗಿದೆ ಅಂದ್ರು.