ರಾಜ್ಯೋತ್ಸವ ಕಾರ್ಯಕ್ರಮ, ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳಿಗೆ ನೃತ್ಯ ಸಂಭ್ರಮದ ಉದ್ಘಾಟನೆ
ಕೆ .ಆರ್.ನಗರ: ಕರ್ನಾಟಕ ಏಕೀಕರಣಗೊಂಡು ೫೦ ವರ್ಷ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರ ಇಡೀ ವರ್ಷ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದ್ದು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಕನ್ನಡ ಪರ ಸಂಘಟನೆಗಳು ನಡೆಸುವ ಸಮಾರಂಭಕ್ಕೆ ಸಹಕಾರ ನೀಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಕನ್ನಡ ಜಾನಪದ ಪರಿಷತ್ ಮತ್ತು ಕೃಷ್ಣರಾಜ ಕನ್ನಡ ಕಲಾ ಸಂಘದ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮ, ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳಿಗೆ ನೃತ್ಯ ಸಂಭ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವೆಂದು ನಾಮಕರಣಗೊಳ್ಳಲು ಕಾರಣಕರ್ತರಾದ ಅಂದಿನ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜಅರಸ್ ಸೇರಿದಂತೆ ಇತರ ಮಹಾನೀಯರನ್ನು ಸ್ಮರಿಸಬೇಕಾದ್ದದ್ದು ಕನ್ನಡ ಭಾಷೀಕರ ಕರ್ತವ್ಯವಾಗಿದೆ ಎಂದ ಶಾಸಕರು ರಾಜ್ಯದಲ್ಲಿ ವಾಸಿಸುವ ಎಲ್ಲರೂ ಕನ್ನಡ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಪ್ರವೇಶ ಮಾಡಿದ್ದಾಗ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕನ್ನಡ ಮತ್ತು ಭಾಷೀಕರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ, ಇಂದು ಅವರೇ ಮುಖ್ಯಮಂತ್ರಿಗಳಾಗಿರುವುದರಿಂದ ಕನ್ನಡಿಗರಿಗೆ ಅನುಕೂಲವಾಗುವಂತಹಾ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದು ಭರವಸೆ ನೀಡಿದರು.
ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದಂತಹವರು ಉನ್ನತ ಹುದ್ದೆಗಳಲ್ಲಿ ಇರುವುದರನ್ನು ಕಾಣುತ್ತಿದ್ದೇವೆ ಆದ್ದರಿಂದ ಪೋಷಕರು ಆಂಗ್ಲಭಾಷೆಗೆ ಆದ್ಯತೆ ಕೊಟ್ಟು ಮಕ್ಕಳಿಗೆ ಒತ್ತಡ ಏರುವ ಬದಲು ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದ ಶಾಸಕ ಡಿ.ರವಿಶಂಕರ್ ಮಾತೃಭಾಷೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸವಲತ್ತು ದೊರೆಯಲಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರ ರಾಜ್ಯದ ನೆಲ, ಜಲ ಮತ್ತು ಭಾಷೆ ಸಂರಕ್ಷಿಸಲು ಬದ್ದವಾಗಿದ್ದು ಕನ್ನಡ ಭಾಷೀಕರಿಗೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದರ ಜತೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರಕಿದ್ದು ಅದನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗುತ್ತ್ತದೆ ಇದಕ್ಕೆ ಕನ್ನಡ ಪ್ರೇಮಿಗಳು ಸರ್ಕಾರಕ್ಕೆ ಸಹಕಾರ ಮತ್ತು ಸಲಹೆ ನೀಡಬೇಕು ಎಂದು ಹೇಳಿದರು.
ಪರಿಷತ್‌ನ ವಿಭಾಗೀಯ ಸಂಚಾಲಕರು ಕೊಡಗು ಜಿಲ್ಲೆಯ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಕಾವೇರಿಪ್ರಕಾಶ್ ಪ್ರಧಾನ ಭಾಷಣ ಮಾಡಿದರು. ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿಪ್ರಕಾಶ್, ತಾಲೂಕು ಅಧ್ಯಕ್ಷ ತಿಮ್ಮಶೆಟ್ಟಿ, ಪ್ರಧಾನಕಾರ್ಯದರ್ಶಿ ಸೈಯದ್‌ರಿಜ್ವಾನ್, ಖಜಾಂಚಿ ರಾಜಯ್ಯ ಮಾತನಾಡಿದರು.
ಮುಸ್ಲಿಂ ಧರ್ಮಗುರು ಹಝ್ರತ್ ಮುನವ್ವರ್ ಆಲಿ ಷಾ ಖಾದ್ರಿ ಮದಾರಿ, ಉಡುಪಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಡಿ.ಎಸ್.ಗುರುಶಾಂತಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯ ಡಾ.ದರ್ಶನ್, ಮೂಳೆತಜ್ಞ ಡಾ.ಗೌತಮ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್, ಭಾಗ್ಯಲಕ್ಷ್ಮಿ ಹೆಲ್ತ್ ಸೆಂಟರ್‌ನ ದೇವೇಂದ್ರಕುಮಾರ್ ಮತ್ತಿತರರನ್ನು ಅಭಿನಂದಿಸಲಾಯಿತು.
ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಕನ್ನಡ ಗೀತೆಗಳಿಗೆ ನೃತ್ಯ ಮಾಡಿ ರಂಜಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ಮುಖ್ಯಸ್ಥರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಸಂಘದ ಪದಾಧಿಕಾರಿಗಳಾದ ಶಿವಲಿಂಗಯ್ಯ, ಎ.ಸಿ.ಸುರೇಶ್, ರಾಮಶೆಟ್ಟಿ, ಶಿಲ್ಪಶ್ರೀನಿವಾಸ್, ಶಾಂತಿರಾಜ್, ವ್ಯಾನ್‌ಸುರೇಶ್, ಮಂಜುನಾಥ್ ಮತ್ತಿತರರು ಹಾಜರಿದ್ದರು.