ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯು ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿರುವ ಬಗ್ಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿನಂದನೆ ಸಲ್ಲಿಸಿದ್ದಾರೆ.
ವೀಡಿಯೋ ಮೂಲಕ ಅಭಿನಂದನೆ ಸಲ್ಲಿಸಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದಕ್ಷಿಣ ಕನ್ನಡ ಜಿಲ್ಲೆಯು 2024ನೆ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಹಾಗೂ ಎಸೆಸೆಲ್ಸಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಖುಷಿಯ ವಿಚಾರ. ಇದಕ್ಕಾಗಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಇಲಾಖಾ ಸಿಬ್ಬಂದಿಗೆ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಎಸೆಸೆಲ್ಸಿಯಲ್ಲಿ ಕಳೆದ ವರ್ಷ ಶೇ. 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 125ರಿಂದ ಈ ಬಾರಿ 270ಕ್ಕೆ ಏರಿಕೆ ಆಗಿರುವುದು ಗಮನಾರ್ಹ ಬೆಳವಣಿಗೆ. ಅದರಲ್ಲೂ ಶೇ. 100 ಫಲಿತಾಂಶ ಪಡೆದ ಸರಕಾರಿ ಶಾಲೆಗಳ ಸಂಖ್ಯೆ 35ರಿಂದ 84ಕ್ಕೆ ಏರಿಕೆಯಾಗಿದೆ. ಪಿಯುಸಿಯಲ್ಲಿ ಕಳೆದ ವರ್ಷ 37 ಕಾಲೇಜುಗಳು ಶೇ. 100 ಫಲಿತಾಂಶ ಪಡೆದಿದ್ರೆ ಈ ಬಾರಿ ಅದು 59ಕ್ಕೆ ಏರಿಕೆಯಾಗಿರುವುದು ಉತ್ತಮ ವಿಚಾರ ಎಂದು ಅವರು ಹೇಳಿದ್ದಾರೆ.