ಮಂಗಳೂರು(ದಕ್ಷಿಣ ಕನ್ನಡ): ಸಂಸತ್ತಿನಿಂದ 146 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳೂರು ನಗರದ ಮಿನಿ ಸೌಧದ ಬಳಿ ಪ್ರತಿಭಟನೆ ನಡೆಯಿತು.
ಇದೇ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಸಂಸತ್ತಿನಲ್ಲಿ ನಡೆದ ದಾಂಧಲೆಗೆ ಭದ್ರತಾ ವೈಫಲ್ಯ ಕಾರಣವಾಗಿದ್ದು ಅದಕ್ಕೆ ಗೃಹ ಸಚಿವರು ಸ್ಪಷ್ಟೀಕರಣ ನೀಡಬೇಕೆಂದು ಕೇಳಿದರೆ ಸಂಸದರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮೂಲಭೂತ ಹಕ್ಕುಗಳು ದಿನೇ ದಿನೇ ಕ್ಷೀಣಿಸುತ್ತಿದೆ. ಮಾಧ್ಯಮಗಳು ಕೂಡ ಪ್ರಶ್ನೆ ಮಾಡಲಾಗದಂತಹ ಸ್ಥಿತಿ ಇದೆ. ಮೂರನೆ ಬಾರಿ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾದರೆ ಸಂವಿಧಾನ ಕೂಡ ಉಳಿಯುವುದಿಲ್ಲ. ಯಾವ ಸಂಸ್ಥೆಯು ಇರುವುದಿಲ್ಲ. ಮೋದಿಯವರನ್ನು ಪೂಜೆ ಮಾಡಿ ಕುಳಿತುಕೊಳ್ಳುವ ಸ್ಥಿತಿ ಬರಲಿದೆ. ಇಂತಹ ಸರ್ವಾಧಿಕಾರ ಧೋರಣೆ ವಿರುದ್ದ ಹೋರಾಟ ಮುಂದುವರಿಯಲಿದೆ ಎಂದರು.