ಕಾನ್ಪುರ: ಪ್ರಧಾನಿ ನರೇಂದ್ರ ಮೋದಿ ಅವರ ರಾಮರಾಜ್ಯದಲ್ಲಿ ದಲಿತರು, ಇತರ ಹಿಂದುಳಿದ ವರ್ಗದವರಿಗೆ ಉದ್ಯೋಗ ಸಿಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಕಾನ್ಪುರದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಜನಂಖ್ಯೆಯ ಶೇ 90ರಷ್ಟಿರುವ ದಲಿತರು, ಬಡುಕಟ್ಟು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಬೇಕಾದಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಿಲ್ಲ. ಮೋದಿ ಅವರ ರಾಮರಾಜ್ಯದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ಶೇ 50ರಷ್ಟು ಜನರು ಹಿಂದುಳಿದ ವರ್ಗಗಳಿಗೆ ಸೇರಿದವರು. ಶೇ 15ರಷ್ಟು ದಲಿತರು, ಶೇ 8ರಷ್ಟು ಬುಡಕಟ್ಟು ಮತ್ತು ಶೇ 15ರಷ್ಟು ಅಲ್ಪಸಂಖ್ಯಾತರನ್ನು ಹೊಂದಿದೆ. ನೀವು ಎಷ್ಟು ಬೇಕಾದರೂ ಮೊರೆ ಇಡಿ, ಆದರೆ ಈ ದೇಶದಲ್ಲಿ ನಿಮಗೆ ಉದ್ಯೋಗ ಸಿಗದು. ನೀವು ಹಿಂದುಳಿದ, ದಲಿತ, ಬುಡಕಟ್ಟು ಅಥವಾ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ನಿಮಗೆ ಕೆಲಸ ಸಿಗುವುದಿಲ್ಲ. ನಿಮಗೆ ಉದ್ಯೋಗ ನೀಡಲು ಪ್ರಧಾನಿ ಮೋದಿಗೆ ಇಷ್ಟವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ದಲಿತರ ವಿರುದ್ಧ ತಾರತಮ್ಯ ಧೋರಣೆ ಮಾಡಲಾಗುತ್ತಿದೆ. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ನೀವು ಎಷ್ಟು ಮಂದಿ ದಲಿತರು ಹಾಗೂ ಬುಡಕಟ್ಟು ಜನಾಂಗದವರನ್ನು ನೋಡಿದ್ದೀರಿ? ಬುಡಕಟ್ಟು ರಾಷ್ಟ್ರಪತಿಯನ್ನು (ದ್ರೌಪದಿ ಮುರ್ಮು) ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಮಾಜಿ ರಾಷ್ಟ್ರಪತಿ (ರಾಮನಾಥ ಕೋವಿಂದ್) ಅವರನ್ನು ಒಳಗೆ ಬಿಡಲಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದೇಶದ ಒಟ್ಟು ಸಂಪತ್ತಿನ ಸಿಂಹಪಾಲು ಶೇ 2ರಿಂದ 3ರಷ್ಟಿರುವ ಜನರ ಕೈಯಲ್ಲಿದೆ. ಅದಾನಿ, ಅಂಬಾನಿ, ಟಾಟಾ, ಬಿರ್ಲಾ…ಈ ಶೇ ಎರಡು-ಮೂರು ಜನರು ನವ ಭಾರತದ ‘ಮಹಾರಾಜರು’ ಎಂದು ಟೀಕಿಸಿದ್ದಾರೆ.