ನಂಜನಗೂಡಿನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಜನಜಾಗೃತಿ ಸಮಾವೇಶ
ಮೈಸೂರು: ಭಾರತದ ಸಂವಿಧಾನ ಎಲ್ಲಿಯವರೆಗೆ ಜೀವಂತವಾಗಿರುತ್ತದೋ, ಅಲ್ಲಿಯವರೆಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜೀವಂತರಾಗಿರುತ್ತಾರೆ ಎಂದು ಸಾಹಿತಿ, ಹೋರಾಟಗಾರ ಹಾಗೂ ಲೇಖಕ ಡಾ. ವಿಠ್ಠಲ್ ವಗ್ಗನ್ ಅಭಿಪ್ರಾಯಪಟ್ಟರು.
ಸಂವಿಧಾನ ಸಮರ್ಪಣ ದಿನದ ಅಂಗವಾಗಿ: ನಂಜನಗೂಡು ತಾಲೂಕು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಶನಿವಾರ ಅಂಬೇಡ್ಕರ್ ಭವನ ಆವರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಶಿಲೆ, ಪ್ರತಿಮೆಗಳಲ್ಲಿ ಇರುವುದಿಲ್ಲ. ಬದಲಾಗಿ ಪುಸ್ತಕಗಳಲ್ಲಿ ಇರುತ್ತಾರೆ. ಹಾಗಾಗಿ, ಬಾಬಾ ಸಾಹೇಬರ ಚಿಂತನೆಗಳು, ಬರಹಗಳನ್ನು ಯುವಕರು ಹೆಚ್ಚು ಮೈಗೂಡಿಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿ ಯಾಗುವುದರ ಜತೆಗೆ ನಿಮ್ಮ ವಿವೇಚನೆ, ವಿಚಾರಗಳು ಗುಣ ಮಟ್ಟದಿಂದ ಕೂಡಿರುತ್ತವೆ ಎಂದು ಸಲಹೆ ನೀಡಿದರು.
ಮುಸ್ಲಿಂರು ಕ್ರಿಶ್ಚಿಯನ್, ಜೈನರು ಸೇರಿದಂತೆ ಇತರ ಧರ್ಮದವರಿಗೆ ಅವರದೇ ಆದ ಒಂದು ಐಡೆಂಟಿಟಿ ಇರುತ್ತದೆ. ಆದರೆ, ದಲಿತರಿಗೆ ಯಾವುದೇ ಐಡೆಂಟಿಟಿ ಇಲ್ಲ. ಈ ಐಡೆಂಟಿಟಿ ಸಿಗಬೇಕಾದರೆ ಬೌದ್ಧ ದಮ್ಮದ ನೆರಳಿಗೆ ಬಂದಾಗ ಮಾತ್ರ ಸಿಗುತ್ತದೆ ಎಂದು ಹೇಳಿದರು.
ಅಪ್ಪ ಜನ್ಮಕೊಟ್ಟರೇ, ಬಾಬಾ ಸಾಹೇಬರು ಬರೆದಿರುವ ಸಂವಿಧಾನ ಅಕ್ಷರ, ಅರಿವು, ಅನ್ನ, ಆತ್ಮಾಭಿಮಾನವನ್ನು ನೀಡುವುದರ ಜತೆಗೆ ಬದುಕು ಕಟ್ಟಿಕೊಡುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಎಸ್ ಸಿ, ಎಸ್ ಟಿ ಹಾಗೂ ಒಬಿಸಿಯವರು ಗುಲಾಮರಾಗಿ ಮೇಲ್ವರ್ಗದವರ ಮನೆಯಲ್ಲಿ ಕೆಲಸ ಮಾಡಬೇಕಿತ್ತು. ಹಾಗಾಗಿ ಸಂವಿಧಾನಕ್ಕೆ ದಕ್ಕೆ ಬಂದರೆ ಮತ್ತೆ ಗುಲಾಮರಾಗಿ ದುಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲವು ವ್ಯಕ್ತಿಗಳು ಸಂವಿಧಾನ ಬದಲಾಯಿಸುವ ಮಾತಾಡುತ್ತಾರೆ. ಸಂವಿಧಾನ ಬದಲಾಯಿಸುವುದು ಅಷ್ಟು ಸುಲಭದ ಮಾತಲ್ಲ. 2000ನೇ ಇಸವಿಯಲ್ಲಿ ವಾಜಪೇಯಿಯವರು ಸಂವಿಧಾನದಲ್ಲಿ ಕೆಲವು ಬದಲಾವಣೆ ತರುವ ಕೆಲಸವನ್ನು ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ಅವರಿಗೆ ವಹಿಸುತ್ತಾರೆ. ಆದರೆ, ಇದರಲ್ಲಿ ಯಾವ ಅಂಶವನ್ನು ಸೇರಿಸಲು, ತೆಗೆಯಲು ಸಾಧ್ಯವಿಲ್ಲ ಎಂದು ವೆಂಕಟಾಚಲಯ್ಯ ಸ್ಪಷ್ಟವಾಗಿ ಹೇಳುತ್ತಾರೆ. ತದನಂತರ 2010 ಹಾಗೂ 2018ರಲ್ಲಿಯೂ ಬದಲಾವಣೆಯ ಕೂಗು ಬರುತ್ತದೆ. ಹಾಗಾಗಿ, ಸಂವಿಧಾನ ಬದಲಾಯಿಸುವುದು ಸೂರ್ಯ, ಚಂದ್ರ ಇರುವವರೆಗೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಬಾಬಾ ಸಾಹೇಬರ ವಿಚಾರಧಾರೆ ಹಾಗೂ ಸಂವಿಧಾನ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಯಾವ ಕಣ್ಣಿಗೂ ಪೆಟ್ಟಾದರೂ ಕಷ್ಟವಾಗುತ್ತದೆ. ಹಾಗಾಗಿ, ಎರಡನ್ನೂ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಭಾರತ ವೈವಿಧ್ಯತೆ, ಹಲವಾರು ಧರ್ಮಗಳಿಂದ ಕೂಡಿರುವ ದೇಶ ಹಾಗಾಗಿ, ಶತಮಾನಗಳಿಂದ ವರ್ಣಶ್ರಮದಿಂದ ನೊಂದು ಬೆಂದಿರುವ ದಲಿತರು, ಹಿಂದುಳಿದವರ ಬದುಕಿಗಾಗಿ, ಸಮಾನತೆಗಾಗಿ ಸಂವಿಧಾನ ಬೇಕೇ ಬೇಕು ಎಂದರು.
ವಿಶ್ವಸಂಸ್ಥೆಯಲ್ಲಿ ಸಂವಿಧಾನ: ಆಡಳಿತಾತ್ಮಕ ವ್ಯವಸ್ಥೆ ಹಾಗೂ ಆರ್ಥಿಕ ವ್ಯವಸ್ಥಗೆ ಸಹಕಾರಿಯಾಗುತ್ತದೆ ಎಂದು ಅಂಬೇಡ್ಕರ್ ಅವರ ವಿಚಾರ, ಬರಹ ಮತ್ತು ಭಾಷಣಗಳು, ಚಿಂತನೆಗಳನ್ನು ವಿಶ್ವಸ್ಥೆಯಲ್ಲಿ ಹೆಚ್ಚಾಗಿ ಚರ್ಚೆ ಮಾಡಲಾಗುತ್ತದೆ. ಹಾಗಾಗಿ ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿ ಎಂದು ಕರೆಯಲಾಗುತ್ತದೆ.
ಅಕ್ಷರಗಳಿಗೆ ಚಿನ್ನದ ಲೇಪನ: ಅಂಬೇಡ್ಕರ್ ಅವರು ಭಾರತಕ್ಕೆ ಉತ್ತಮ ಸಂವಿಧಾನ ಬರೆದುಕೊಟ್ಟಿದ್ದಾರೆ. ಈ ಅಕ್ಷರಗಳು ಅಮೇರಿಕದಲ್ಲಿದ್ದಾರೆ.ಒಂದೊಂದು ಅಕ್ಷರಗಳನ್ನು ಚಿನ್ನದಿಂದ ಲೇಪನ ಮಾಡಿ ಸಂರಕ್ಷಣೆ ಮಾಡುತ್ತಿದ್ದೆವು ಎಂದು ಅಮೇರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿರುವುದನ್ನು ನೆನಪುಮಾಡಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಉದ್ಘಾಟಿಸಿದರು. ಬಿಜೆಪಿ ಮುಖಂಡ ಎಸ್. ಮಹದೇವಯ್ಯ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಹನಿಯಂಬಳ್ಳಿ ಮಹದೇವಸ್ವಾಮಿ ಮಾತನಾಡಿದರು. ಬಿಎಸ್ಪಿ ಜಿಲ್ಲಾಧ್ಯಕ್ಷ ಶ್ರೀಕಂಠ, ಮೂಗಶೆಟ್ಟಿ, ಮೊಹಮದ್ ಅಕ್ಬರ್ ಅಲಿ, ದೊರೆಸ್ವಾಮಿನಾಯಕ, ಕೆಂಪಣ್ಣ, ಸಮನ್ವಯ ಸಮಿತಿಯ ಅಧ್ಯಕ್ಷ ಮಂಜು ಶಂಕರಪುರ, ಗೀಕಳ್ಳಿ ಮಹದೇವಸ್ವಾಮಿ, ರಾಜಶೇಖರ್ (ಶೇಕಿ), ನಾಗೇಂದ್ರ ಬಸವಟ್ಟಿಗೆ, ಬೊಕ್ಕಹಳ್ಳಿ ಮಹದೇವಸ್ವಾಮಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.