Friday, April 4, 2025
Google search engine

Homeಅಪರಾಧಕಾನೂನುದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್​ ಅವರು ಜಾಮೀನಿಗಾಗಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಇಂದು (ನವೆಂಬರ್​ 28) ನಡೆದಿದೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಾಡಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಆದರೆ ರೆಗ್ಯುಲರ್​ ಬೇಲ್​ಗಾಗಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆದಿದೆ. ಎಸ್​ಪಿಪಿ ವಾದ ಬಾಕಿ ಇರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.

ಬಹಳ ತಡವಾಗಿ ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಪ್ರತ್ಯಕ್ಷ ದರ್ಶಿಯ ಹೇಳಿಕೆ ವಿಳಂಬದಿಂದ ಜಾಮೀನು ಕೊಟ್ಟ ಹಲವು ಪ್ರಕರಣಗಳಿವೆ. ಕೇಸ್ ಡೈರಿಯಲ್ಲಿ ಹೇಳಿಕೆ ನಮೂದಿಸಬೇಕಿರುವ ಅಗತ್ಯತೆ. ಇತ್ಯಾದಿ ಪ್ರಕ್ರಿಯೆಗಳ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿದೆ. ಸಿಆರ್‌ಪಿಸಿ 167 ಅಥವಾ 172 ಅಡಿಯಲ್ಲಿ ಪ್ರಕ್ರಿಯೆ ಪಾಲಿಸಬೇಕು. ಕೋಕಾ, ಯುಎಪಿಎ, ಎನ್‌ಐಎ ಕಾಯ್ದೆಯಡಿಯಲ್ಲಿ ಮಾತ್ರ ವಿನಾಯಿತಿ ಇದೆ. ಈ ಕೇಸ್ ಗಳಲ್ಲಿ ವಿನಾಯಿತಿ ಇಲ್ಲ ಎಂದು ನಾಗೇಶ್ ವಾದ ಮಾಡಿದ್ದಾರೆ.

ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಗಳಲ್ಲಿ ವೈರುಧ್ಯಗಳಿವೆ. ಮರ್ಮಾಂಗಕ್ಕೆ ಹೊಡೆದ ಬಗ್ಗೆ ಮತ್ತೊಂದು ಹೇಳಿಕೆಯಲ್ಲಿ ಉಲ್ಲೇಖವಿಲ್ಲ. 161 ಹೇಳಿಕೆಗೂ, 164 ಹೇಳಿಕೆಗೂ ವ್ಯತ್ಯಾಸಗಳಿವೆ. 161 ಹೇಳಿಕೆ ಪಡೆದಾಗ ಕೇಸ್ ಡೈರಿಯಲ್ಲಿ ಎಂಟ್ರಿ ಮಾಡಬೇಕು. ಅದರ ಪ್ರತಿಯನ್ನು ಮ್ಯಾಜಿಸ್ಟ್ರೇಟ್​ಗೆ ನೀಡಬೇಕು. ಈ ಪ್ರಕ್ರಿಯೆಗಳನ್ನು ತನಿಖಾಧಿಕಾರಿ ಪಾಲಿಸಿಲ್ಲ. ಮೊದಲ ರಿಮಾಂಡ್ ಅರ್ಜಿಗಳಲ್ಲಿ ಸಾಕ್ಷಿಗಳ ಹೇಳಿಕೆ ಉಲ್ಲೇಖವಿಲ್ಲ. ಜೂನ್ 22ರ ರಿಮಾಂಡ್ ಅರ್ಜಿಯಲ್ಲಿ ಮಾತ್ರ ಉಲ್ಲೇಖವಿದೆ. ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷ ಸಾಕ್ಷಿದಾರರ ಹೆಸರುಗಳನ್ನು ನಮೂದಿಸಿಲ್ಲ ಎಂದು ಸಿ.ವಿ. ನಾಗೇಶ್ ವಾದಿಸಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಲಾಗಿತ್ತು. ಆ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಮಧ್ಯಂತ ಜಾಮೀನು ನೀಡಲಾಗಿತ್ತು. ಆದರೆ ಜಾಮೀನು ಪಡೆದ ತಿಂಗಳು ಕಳೆಯುತ್ತ ಬಂದರೂ ಕೂಡ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿಲ್ಲ. ಈ ಬಗ್ಗೆ ಹೈಕೋರ್ಟ್​ಗೆ ಸಿ.ವಿ. ನಾಗೇಶ್ ಮಾಹಿತಿ ನೀಡಿದ್ದಾರೆ. ‘ಎಂಆರ್‌ಐ ಸ್ಕ್ಯಾನ್ ಆಗಿದೆ. ಬಿ.ಪಿ. ವ್ಯತ್ಯಾಸವಾಗುತ್ತಿದೆ. ಅದು ಸರಿ ಹೋಗದೇ ಯಾವುದೇ ಟ್ರೀಟ್ ಮೆಂಟ್ ಕೊಡಲಾಗುವುದಿಲ್ಲ. ಸರ್ಜರಿ ಬಗ್ಗೆ ವೈದ್ಯರು ತೀರ್ಮಾನಿಸುತ್ತಾರೆ’ ಎಂದು ಸಿ.ವಿ. ನಾಗೇಶ್ ಹೇಳಿದ್ದಾರೆ.

ದರ್ಶನ್​​ ಮ್ಯಾನೇಜರ್ ನಾಗರಾಜ್ ಪರ ವಕೀಲ ಸಂದೇಶ್ ಚೌಟ ಅವರು ವಾದ ಮಂಡಿಸಿದ್ದಾರೆ. ಆರೋಪಿಗಳಿಗೆ ಗ್ರೌಂಡ್ಸ್ ಆಫ್‌ ಅರೆಸ್ಟ್​ ನೀಡಿಲ್ಲ. ಬಂಧನಕ್ಕೆ ಕಾರಣಗಳನ್ನು ನೀಡದಿರುವುದು ಗಂಭೀರ ಪ್ರಮಾದ. ಈ ಕಾರಣಕ್ಕೆ ಜಾಮೀನು ನೀಡಬೇಕೆಂದು ಸಂದೇಶ್ ಚೌಟ ವಾದ ಮಾಡಿದ್ದಾರೆ. ದರ್ಶನ್​ ಸೇರಿ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ.

RELATED ARTICLES
- Advertisment -
Google search engine

Most Popular