Wednesday, January 21, 2026
Google search engine

Homeಅಪರಾಧಕಾನೂನುದರ್ಶನ್ ಪತ್ನಿಗೆ ಅಶ್ಲೀಲ ಸಂದೇಶ, 8 ಮಂದಿ ಬಂಧನ

ದರ್ಶನ್ ಪತ್ನಿಗೆ ಅಶ್ಲೀಲ ಸಂದೇಶ, 8 ಮಂದಿ ಬಂಧನ

ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆಗೆ ಸಜ್ಜಾಗುತ್ತಿದ್ದಾರೆ. ವಿಜಯಲಕ್ಷ್ಮಿ ಅವರು ಡಿಸೆಂಬರ್ ತಿಂಗಳಲ್ಲಿ ತಮ್ಮ ಬಗ್ಗೆ ಅಶ್ಲೀಲ ಕಮೆಂಟ್​​ಗಳನ್ನು ಮಾಡುತ್ತಿರುವ, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿರುವವರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರನ್ನು ಭೇಟಿ ಆಗಿ ಮೌಕಿಖವಾಗಿಯೂ ದೂರು ಹೇಳಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮೊದಲು ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ದಾವಣಗೆರೆಯ ಇಂಜಿನಿಯರ್ ನಿತಿನ್, ಚಿಕ್ಕಬಾಣಾವರದ ಆಟೋ ಡ್ರೈವರ್ ಚಂದ್ರು, ಹುಬ್ಬಳ್ಳಿ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ತಳವಾರ್, ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ್ ಬಂಧಿತರಾಗಿದ್ದರು. ಇವರ ಜೊತೆಗೆ ಇನ್ನೂ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಟೆಕ್ನಿಕಲ್ ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದಾರೆ. ಕೆಲವರನ್ನು ಜನವರಿ 7ನೇ ತಾರೀಖು ಹಾಗೂ ಅದಕ್ಕೆ ಮುಂಚೆಯೇ ಪೊಲೀಸರು ಬಂಧಿಸಿದ್ದರು. ಕೆಲವು ಆರೋಪಿಗಳು ಪರಾರಿ ಆಗಿದ್ದರು. ಇದೀಗ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದು, ಸಾಕ್ಷ್ಯಗಳ ಪರಿಶೀಲನೆ ಬಳಿಕ ಎಲ್ಲರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ದಾವಣಗೆರೆಯಲ್ಲಿ ಮಾತನಾಡಿದ್ದ ವಿಜಯಲಕ್ಷ್ಮಿ, ‘ದರ್ಶನ್ ಇಲ್ಲದೇ ಇರುವಾಗ ಕೆಲವರು ಮಾತನಾಡುತ್ತಿದ್ದಾರೆ, ದರ್ಶನ್ ಇದ್ದಾಗ ಅವರು ಇದ್ದಾರೆಂಬುದು ಸಹ ಗೊತ್ತಾಗುತ್ತಿರಲಿಲ್ಲ’ ಎಂದು ಪರೋಕ್ಷವಾಗಿ ಸುದೀಪ್​​ಗೆ ಟಾಂಗ್ ನೀಡಿದ್ದರು. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ವಿರುದ್ಧ ಟ್ರೋಲಿಂಗ್ ಶುರುವಾಗಿತ್ತು, ಅವರ ವಿರುದ್ಧ ಸುದೀಪ್ ಅಭಿಮಾನಿಗಳು ಮುಗಿಬಿದ್ದಿದ್ದರು. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ಅವರು ಪೊಲೀಸರಿಗೆ 15 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ದೂರು ನೀಡಿದ್ದರು. 150 ಸ್ಕ್ರೀನ್ ಶಾಟ್​​ಗಳನ್ನು ಸಹ ವಿಜಯಲಕ್ಷ್ಮಿ ಹಂಚಿಕೊಂಡಿದ್ದರು.

ವಿಜಯಲಕ್ಷ್ಮಿ ಅವರು ದೂರು ನೀಡಿದ ಕೆಲ ದಿನಗಳ ಬಳಿಕ, ತಮ್ಮ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವಿಜಯಲಕ್ಷ್ಮಿ, ‘ನಾನು ನೀಡಿದ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ, ಕಾನೂನಿನ ಮೇಲೆ ನನಗೆ ನಂಬಿಕೆ ಇತ್ತು, ಆದರೆ ಈಗ ಆ ನಂಬಿಕೆಯನ್ನು ಪ್ರಶ್ನೆ ಮಾಡುವಂತಾಗಿದೆ. ಅದೇ ಮತ್ತೊಬ್ಬ ಮಹಿಳೆ ಕೊಟ್ಟಿದ್ದ ದೂರಿಗೆ ಒಂದೇ ದಿನದಲ್ಲಿ ಸ್ಪಂದಿಸಿದ್ದರು. ನನ್ನ ವಕೀಲರು ಪದೇ ಪದೇ ಫಾಲೋ ಅಪ್ ಮಾಡಿದರೂ ಸಹ ಪೊಲೀಸರು ತನಿಖೆ ಮಾಡುತ್ತಿಲ್ಲ’ ಎಂದು ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸರು ಸ್ಪಷ್ಟನೆ ನೀಡಿ, ಇನ್ನಷ್ಟು ಸಕ್ರಿಯವಾಗಿ ತನಿಖೆ ನಡೆಸಿದ್ದು, ಈ ವರೆಗೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಲಕ್ಷ್ಮಿ ಅವರಿಗೆ ಮುಂಚೆ ನಟಿ ರಮ್ಯಾ ಅವರು ತಮಗೆ ಅಶ್ಲೀಲ ಕಮೆಂಟ್​​ಗಳನ್ನು ಮಾಡಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರು. ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಿದ್ದರು. ಅದರ ಬಳಿಕ ವಿಜಯಲಕ್ಷ್ಮಿ ಅವರು ಸುದೀಪ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರು.

RELATED ARTICLES
- Advertisment -
Google search engine

Most Popular