ಬೆಂಗಳೂರು: ನಟ ದರ್ಶನ್ ಪತ್ನಿ ಕುರಿತು ಪೊಲೀಸ್ ದಾಖಲೆಗಳಲ್ಲಿ ಸರಿಯಾದ ಮಾಹಿತಿ ದಾಖಲಿಸುವಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ೧೫ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು ಸದ್ಯ ಆರೋಪಿಗಳು ಪರಪ್ಪರನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಪವಿತ್ರಾ ಗೌಡ ಅವರು ದರ್ಶನ್ ಪತ್ನಿ ಎಂದು ಹೇಳಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ೧ ಆರೋಪಿಯಾಗಿರುವ ಶ್ರೀಮತಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನೀವು ದರ್ಶನ್ ರ ಎರಡನೇ ಪತ್ನಿ ಪವಿತ್ರಾ ಗೌಡ ಎಂದು ತಪ್ಪಾಗಿ ಹೇಳಿದ್ದೀರಿ. ಹೀಗಾಗಿ ರಾಷ್ಟ್ರಮಟ್ಟದ ಮಾಧ್ಯಮಗಳು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ದಂಪತಿ ಬಂಧನ ಅಂತ ಸುದ್ದಿ ಮಾಡಿವೆ. ಇದು ನನ್ನ ಮತ್ತು ನನ್ನ ಮಗ ವಿನೀಶ್ ಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಬಾರದು. ಪೊಲೀಸ್ ದಾಖಲೆಗಳಲ್ಲಿ ಈ ಮಾಹಿತಿ ಸ್ಪಷ್ಟವಾಗಿರಲಿ. ಇದರಿಂದ ನನಗೆ ಭವಿಷ್ಯದಲ್ಲಿ ತೊಂದರೆ ಆಗದಿರಲಿ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.
ಪವಿತ್ರಾಗೌಡ ದರ್ಶನ್ ಪತ್ನಿಯಲ್ಲ ಆಕೆ ನನ್ನ ಗಂಡನ ಸ್ನೇಹಿತೆ ಅಷ್ಟೆ. ದರ್ಶನ್ ಅವರನ್ನು ನಾನು ಮಾತ್ರ ಕಾನೂನಾತ್ಮಕವಾಗಿ ಮದುವೆ ಆಗಿದ್ದೇನೆ. ನಮ್ಮ ಮದುವೆ ೨೦೦೩ರ ಮೇ ೧೯ರಂದು ಧರ್ಮಸ್ಥಳದಲ್ಲಿ ನಡೆದಿತ್ತು ಎಂದು ವಿಜಯಲಕ್ಷ್ಮಿ ಅವರು ಈ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಶ್ರೀಮತಿ ಪವಿತ್ರಾ ಗೌಡ ಅವರು ಶ್ರೀ ಸಂಜಯ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಮಗಳಿದ್ದಾಳೆ. ಎಲ್ಲಾ ಪೊಲೀಸ್ ಫೈಲ್‌ಗಳಲ್ಲಿ ಈ ಮಾಹಿತಿಯನ್ನು ಸರಿಪಡಿಸುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಭವಿಷ್ಯದಲ್ಲಿ ನನಗೆ ಪವಿತ್ರಾ ಗೌಡರನ್ನು ತಪ್ಪಾಗಿ ಪತ್ನಿ ಎಂದು ನಮೂದಿಸಿರುವ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.