ಮಂಡ್ಯ:ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್‌ಐ ಆಗಿ ಬಂದ ಮಗಳು,ತಂದೆಯ ಕೈಯಿಂದಲೇ ಅಧಿಕಾರ ಸ್ವೀಕರಿಸಿದ ಪುತ್ರಿ,ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರಿಸಿದ ತಂದೆ ಇಂತಹದೊಂದು ಅಪರೂಪದ ಘಟನೆಗೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.
ಸೆಂಟ್ರಲ್ ಠಾಣೆಯಲ್ಲಿ ವೆಂಕಟೇಶ್ ಪಿಎಸ್‌ಐ ಆಗಿದ್ದರು.ಇದೀಗ ಅವರದೇ ಜಾಗಕ್ಕೆ ಪುತ್ರಿ ವರ್ಷಾ ಪಿಎಸ್‌ಐ ಆಗಿ ಬಂದಿದ್ದು, ಅಧಿಕಾರ ಸ್ವೀಕರಿಸಿದ ಪುತ್ರಿ ವರ್ಷಾಗೆ ತಂದೆ ವೆಂಕಟೇಶ್ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.
ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರಾದ ವೆಂಕಟೇಶ್ ಅವರು 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.ಅಲ್ಲದೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್‌ಐ ಪರೀಕ್ಷೆ ಬರೆದು ಮಿಲಿಟರಿ ಕೋಟಾದಡಿ 2010ರ ಬ್ಯಾಚ್‌ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು.ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಮಂಡ್ಯದ ಸೆಂಟ್ರಲ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು.ಇದೀಗ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಇದೇ ಠಾಣೆಗೆ ನೂತನ ಎಸ್‌ಐ ಆಗಿ ಬಂದಿರುವ ತಮ್ಮ ಪುತ್ರಿ ಬಿ.ವಿ. ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಅರ್ಥಶಾಸ್ತ್ರದಲ್ಲಿ ಎಂಎ ಪದವಿಯನ್ನೂ ಪಡೆದಿರುವ ವರ್ಷಾ ಅವರು 2022ರ ಬ್ಯಾಚ್‌ನ ಪಿಎಸ್‌ಐ ಆಗಿದ್ದಾರೆ. ಇವರು ಕಲ್ಬುರ್ಗಿಯಲ್ಲಿ ತರಬೇತಿ ಮುಗಿಸಿ,ಮಂಡ್ಯದಲ್ಲೇ ಒಂದು ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ‍್ಯನಿರ್ವಹಿಸಿದ್ದರು. ಈಗ ಅವರ ಮೊದಲ ಪೋಸ್ಟಿಂಗ್ ಕೂಡ ಮಂಡ್ಯದಲ್ಲೇ ಆಗಿದ್ದು ತಂದೆಯಿಂದಲೇ ಚಾರ್ಚ್ ಪಡೆದು ಪೊಲೀಸ್ ವೃತ್ತಿಜೀವನಆರಂಭಿಸಿರುವುದು ವಿಶೇಷವಾಗಿದೆ. ಪುತ್ರಿಗೆ ಅಧಿಕಾರ ಹಸ್ತಾಂತರ ಮಾಡಿದ ವೆಂಕಟೇಶ್ ಅವರು ಠಾಣೆಯ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ತಂದೆ ಕೈಯಿಂದ ಅಧಿಕಾರ ಸ್ವೀಕರಿಸಿದ ಪಿಎಸ್‌ಐ ವರ್ಷಾ ಅವರು ಮಾತನಾಡಿ ನನ್ನ ತಂದೆಯೇ ನನ್ನ ಜೀವನದ ಹೀರೋ.ಅವರು ಮಾಡುತ್ತಿದ್ದ ಕೆಲಸವೇ ನನಗೆ ಪ್ರೇರಣೆ.16 ವರ್ಷಗಳ ಕಾಲ ನನ್ನ ತಂದೆ ವೆಂಕಟೇಶ್ ದೇಶ ಸೇವೆಯಲ್ಲಿ ತೊಡಗಿದ್ದರು.2010 ರಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಕರ್ತವ್ಯ ನಿಷ್ಠೆ ನನಗೆ ಸ್ಪೂರ್ತಿ. ನಾನು ಕೂಡ ಅವರಂತೆ ಉತ್ತಮ ಕೆಲಸ ನಿರ್ವಹಿಸಿ ಒಳ್ಳೆ ಹೆಸರು ಸಂಪಾದಿಸುವೆ.ನೊಂದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ.ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸೆಂಟ್ರಲ್ ಪೊಲೀಸ್ ಠಾಣೆಗೆ ನಾನು ಪಿಎಸ್‌ಐಯಾಗಿ ನೇಮಕಗೊಂಡಿದ್ದೇನೆ.ಇಂದು ನನ್ನ ಮನಸ್ಸಿಗೆ ತುಂಬಾ ಖುಷಿಯಾಗಿದೆ ಎಂದು ಮಹಿಳಾ ಪಿಎಸ್‌ಐ ವರ್ಷಾ ಭಾವುಕರಾದರು