ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಅಂಗವಾಗಿ ಭಾನುವಾರ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿ ಸಮ್ಮೇಳನದ ವಿವಿಧ ಸಮಿತಿಗಳೊಂದಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷರು, ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜರುಗಿದ ಸಮ್ಮೇಳನಗಳು ಒಂದಕ್ಕೊಂದು ವಿಭಿನ್ನವಾಗಿ ಯಶಸ್ವಿಯಾಗಿವೆ. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿ ನಡೆಯುವ ಸಮ್ಮೇಳನವನ್ನು ಯಶಸ್ವಿ ಗೊಳಿಸಬೇಕು ಎಂದು ಕರೆನೀಡಿದರು.
ಈ ಸಮ್ಮೇಳನದಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸುವುದರಿಂದ ಅವರನ್ನು ನೋಡಿಕೊಳ್ಳುವ, ಸಮ್ಮೇಳನದ ಯಶಸ್ಸಿಗೆ ಪ್ರತಿಯೊಂದು ಸಮಿತಿಯ ಕಾರ್ಯವು ಬಹುಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಇದೇ ವೇಳೆ ಸಮ್ಮೇಳನಕ್ಕೆ ನೇಮಿಸಿರುವ ವಿವಿಧ ಸಮಿತಿಯ ಮುಖ್ಯಸ್ಥರೊಂದಿಗೆ, ಸದಸ್ಯರೊಂದಿಗೆ ಮಾಡಬೇಕಾದ ಕೆಲಸಗಳ ಕುರಿತು ಮಾರ್ಗದರ್ಶನ ನೀಡಿದರು.
ರಾಜ್ಯ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಸಮ್ಮೇಳನ ನಡೆಯುವುದಕ್ಕೆ ಇನ್ನು 15 ದಿನಗಳು ಇದ್ದು, ಎಲ್ಲರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮುಂದಿನ ವಾರದಿಂದ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಸಮ್ಮೇಳನದ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತೇನೆ. ಪ್ರತಿ ದಿನ ವಿವಿಧ ಸಮಿತಿಯ ಮುಖ್ಯಸ್ಥರು ನಮಗೆ ಸಮ್ಮೇಳನದ ಕಾರ್ಯ ಚಟುವಟಿಕೆಗಳ ಕುರಿತು ವರದಿ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ನಗರ ವಾಣಿ ಸಹ ಸಂಪಾದಕ ಬಿಎನ್ ಮಲ್ಲೇಶ್, ಹಿರಿಯ ಪತ್ರಕರ್ತ ಭಾಮಾ ಬಸವರಾಜಯ್ಯ, ಸದಾನಂದ ಹೆಗಡೆ, ರವಿಬಾಬು, ವ್ಯಂಗ್ಯ ಚಿತ್ರಕಾರ ಹೆಚ್.ಪಿ ಮಂಜುನಾಥ್ ಮತ್ತಿತರರಿದ್ದರು.