ಬೆಂಗಳೂರು: ರಾಜ್ಯದಲ್ಲಿ ಲೆಕ್ಕಕ್ಕೆ 3 ಪಕ್ಷ ಇದೆ. ಆದರೆ ಆಟಕ್ಕೆ ಎರಡೇ ಪಕ್ಷಗಳಿವೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಟ್ ನೀಡಿದ್ದು, ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮರ್ಜ್ ಆಗಬಹುದು, ಆದಷ್ಟು ಬೇಗ ಅವರು ಮರ್ಜ್ ಆಗುವ ಸಾಧ್ಯತೆ ಇದೆ. ಆದಷ್ಟು ಬೇಗ ಅವರು ಮರ್ಜ್ ಆದರೆ ಒಳ್ಳೆಯದೇ ಎಂದಿದ್ದಾರೆ.
ಹಾಗಿದ್ದಾಗ ಎರಡೇ ಪಕ್ಷಗಳು ರಾಜಕಾರಣ ಮಾಡಬಹುದು ಎಂದ ಅವರು, ಎರಡು ಪಕ್ಷಗಳು ಮಾತ್ರ ಇದ್ದಾಗ ನಾವು ರಾಜಕೀಯ ಹೋರಾಟ ಮಾಡಲು ಅನುಕೂಲ ಆಗಲಿದೆ. ಎರಡು ಪಕ್ಷಗಳು ಮಾತ್ರ ಇದ್ದರೆ ರಾಜ್ಯಕ್ಕೂ ಒಳ್ಳೆಯದು ಎಂದಿದ್ದಾರೆ.
ಜೆಡಿಎಸ್ ಅಂದರೆ ಅವರದೊಂದು ಖಾಸಗಿ ಸ್ವತ್ತಾಗಿದ್ದು, ಅವರಿಗೊಂದು ಸಿದ್ದಾಂತ ಇಲ್ಲ ಅವರದೊಂದು ನೀತಿ ಇಲ್ಲ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಚುನಾವಣೆ ಬರುತ್ತಿದೆ. ಅರ್ಜಿ ಹಾಕಲು ಅವಕಾಶ ನೀಡಿ ಡೇಟ್ ಕೂಡ ಫಿಕ್ಸ್ ಆಗಿದೆ. 779 ಜನ ಕಾರ್ಪೊರೇಟ್ ಇಲೆಕ್ಷನ್ ಗೆ ಅರ್ಜಿ ಹಾಕಿದ್ದಾರೆ. ಯಾರು ಅರ್ಜಿ ಹಾಕಿದ್ದಾರೆ ಈಗಲೇ ಕೆಲಸ ಮಾಡಿ. ನಾವೂ ಕೂಡ ಪರಾಮರ್ಶೆ ಮಾಡಿ ಅಭ್ಯರ್ಥಿ ಹಾಕಬೇಕಾಗಿದೆ ಎಂದರು.
ಈ ವರ್ಷ ಚುನಾವಣಾ ವರ್ಷ ಅಂತಲೇ ಭಾವಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡೋದಕ್ಕೆ ನಾವು ರೆಡಿ ಆಗುತ್ತಿದ್ದೇವೆ. ಪಂಚಾಯತ್ ಗಳು ಪುರಸಭೆಗಳು ಮೇಲ್ದೆರ್ಜೆಗೆ ಏರಿಸಲು ಕೆಲಸ ಆಗುತ್ತಿದೆ. ಕೇಂದ್ರದವರೂ ಜನಗಣತಿ ಪ್ರಾರಂಭ ಮಾಡ್ತಾರೆ ಸ್ವಲ್ಪ ದಿನಗಳಲ್ಲಿ, ನಾವು ಚುನಾವಣೆಗೆ ಸಿದ್ದತೆ ಮಾಡಿಕೊಳ್ತಿದ್ದೇವೆ ಎಂದು ತಿಳಿಸಿದರು.



