ಬಂಕಾ (ಬಿಹಾರ) : ಬಿಹಾರದ ಬಂಕಾ ಜಿಲ್ಲೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಟೀನ್‌ನ ಆಹಾರದಲ್ಲಿ ಸತ್ತ ಹಾವು ಪತ್ತೆಯಾಗಿದ್ದು, ಕನಿಷ್ಠ ೧೧ ಮಂದಿ ವಿದ್ಯಾರ್ಥಿಗಳು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ವಾರ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರ್ತವ್ಯದಲ್ಲಿದ್ದ ವೈದ್ಯರ ಪ್ರಕಾರ, ಕೆಲವು ವಿದ್ಯಾರ್ಥಿಗಳು ಫುಡ್ ಪಾಯಿಸನಿಂಗ್ ಆಗಿರುವ ಬಗ್ಗೆ ದೂರು ನೀಡಿದ್ದು, ಬಳಿಕ ಅವರ ಆರೋಗ್ಯ ಸರಿಯಾಗಿತ್ತು. ಆಹಾರದಲ್ಲಿ ಸತ್ತ ಹಾವು ಪತ್ತೆಯಾದ ಬೆನ್ನಲ್ಲೇ ಕ್ಯಾಂಟೀನ್ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಕಾಲೇಜು ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನಾವು ಆಹಾರದ ಸಮಸ್ಯೆ ಎದುರಿಸುವಂತಾಗಿದೆ. ಆದರೆ ಈ ಬಾರಿಯ ಮಿತಿಯನ್ನು ದಾಟಿದೆ. ಕ್ಯಾಂಟೀನ್‌ನ ಆಹಾರದಲ್ಲಿ ಸತ್ತ ಹಾವು ಇದೆ” ಎಂದು ವಿದ್ಯಾರ್ಥಿಯೊಬ್ಬರು ಹೇಳುವಂತೆ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೆಲ್ಲ ನಮ್ಮಿಂದ ಸಹಿಸಲಾಗದು. ಪ್ರತಿ ಬಾರಿ ನಾವು ಕ್ಯಾಂಟೀನ್ ಆಹಾರದ ಬಗ್ಗೆ ಅಧ್ಯಾಪಕರ ಮುಂದೆ ಪ್ರಸ್ತಾಪಿಸಿದಾಗ ಅವರು ಸಮಸ್ಯೆಯನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ” ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮತ್ತೊಂದೆಡೆ, ವಿದ್ಯಾರ್ಥಿನಿಯರು ಕೂಡಾ ಆಹಾರ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ.
ಕೆಲವು ಸಮಯದ ಹಿಂದೆ ಹಿರಿಯ ಅಧಿಕಾರಿಯೊಬ್ಬರು ತಪಾಸಣೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಶೇಕಡ ೯೦ರಷ್ಟು ಅವಧಿ ಮುಗಿದಿರುವ ಆಹಾರ ಪತ್ತೆಯಾಗಿದೆ” ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ. ಇನ್ನು ವಿದ್ಯಾರ್ಥಿಗಳು ಹಾಸ್ಟೆಲ್‌ನ ಆಹಾರದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಹಾಸ್ಟೆಲ್‌ನಲ್ಲಿ ಉಳಿಯಬೇಕಾದರೆ ಮೆಸ್ ಆಹಾರ ಸೇವಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮೆಸ್‌ನ ಆಹಾರ ಸೇವಿಸದಿದ್ದರೆ, ಮೆಸ್ ಶುಲ್ಕವನ್ನು ಪಾವತಿಸದಿದ್ದರೆ, ಅವರನ್ನು ಪರೀಕ್ಷೆಯಿಂದ ನಿರ್ಬಂಧಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಸತ್ತ ಹಾವು ಪತ್ತೆಯಾದ ಘಟನೆಯ ಬಳಿಕ ಜಿಲ್ಲಾಡಳಿತ ಕ್ರಮ ಕೈಗೊಂಡು ತನಿಖೆ ಆರಂಭಿಸಿದೆ. ಇನ್ನು ಈ ಹಿಂದೆಯೂ ಸಹ ಕಾಲೇಜಿನಲ್ಲಿ ಇದೇ ರೀತಿಯ ಆಹಾರ ಸಂಬಂಧಿತ ದೂರು ದಾಖಲಾಗಿತ್ತು.