ಬೆಂಗಳೂರು: ಹಳೇ ವೈಷಮದ ಹಿನ್ನೆಲೆಯಲ್ಲಿ ರೌಡಿಶೀಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ 50 ಅಡಿ ರಸ್ತೆಯ ಅಂಗಡಿಯೊಂದರ ಮುಂದೆ ಸೋಮವಾರ ನಡೆದಿದೆ.
ರಾಜೇಶ್ ಆಲಿಯಾಸ್ ಕರಿಯಾ ರಾಜೇಶ್ ಹಲ್ಲೆಗೊಳಗಾದ ರೌಡಿಶೀಟರ್.
ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಕೆಂಪೇಗೌಡ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ರಾಜೇಶ್ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮಧ್ಯಾಹ್ನ ಹನುಮಂತ ನಗರ ಅಂಗಡಿ ಬಳಿ ಟೀ ಕುಡಿಯಲು ಬಂದಿದ್ದ ವೇಳೆ ಒಂದು ಕಾರು ಹಾಗೂ ಒಂದು ಬೈಕ್ ನಲ್ಲಿ ಬಂದ ನಾಲ್ವರು ಆಗಂತುಕರು ಮಾರಕಾಸ್ತ್ರ ಹಾಗೂ ಕ್ರಿಕೆಟ್ ಬ್ಯಾಟ್ ಗಳಿಂದ ಏಕಾಏಕಿ ರಾಜೇಶ್ ಮೇಲೆ ದಾಳಿ ಮಾಡಿದ್ದಾರೆ.
ಘಟನೆಯಲ್ಲಿ ರಾಜೇಶ್ ಕೈ-ಕಾಲು ಹಾಗೂ ತಲೆಗೆ ಭಾರೀ ಪೆಟ್ಟಾಗಿದೆ. ತೀವ್ರ ರಕ್ತಸ್ರಾವವಾಗಿದ್ದ ರಾಜೇಶ್ ನನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಣಾಂತಿಕವಾಗಿ ಹಲ್ಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.