ಬೆಂಗಳೂರು : ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮತ್ತು ಶಿಶುವಿನ ಮರಣ ಸಂಬಂಧ ರಾಜ್ಯದ ಕಾಂಗ್ರೆಸ್ ಸರಕಾರದ ಅಮಾನವೀಯ ನಡೆಯನ್ನು ಜನರು ಪ್ರಶ್ನಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಬಳ್ಳಾರಿ ದುರ್ಘಟನೆ ಸಂಬಂಧ ಸೂಕ್ತ ನ್ಯಾಯಾಂಗ ತನಿಖೆ ಮಾಡಿಸಬೇಕು ಹಾಗೂ ಮೃತ ಗರ್ಭಿಣಿಯರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಬ್ಲ್ಯಾಕ್ ಲಿಸ್ಟ್ ಆದ ಕಂಪೆನಿಯಿಂದ ಇವರು ಐವಿ ಗ್ಲುಕೋಸ್ ಖರೀದಿಸಿದ್ದರು. ಬಳ್ಳಾರಿ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ದುರ್ಘಟನೆಯಲ್ಲಿ 7 ಜನ ಬಾಣಂತಿಯರು ಮತ್ತು ಮಗು ಸಾವನ್ನಪ್ಪಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಇಲ್ಲಿಗೆ ಭೇಟಿ ಕೊಟ್ಟಿಲ್ಲ ಎಂದು ಟೀಕಿಸಿದರು.
ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರ ತಂಡವು ಲೋಕಾಯುಕ್ತವನ್ನು ಇವತ್ತು ಭೇಟಿ ಮಾಡಲಿದೆ. ರಾಜ್ಯ ಸರಕಾರ ತನ್ನ ಜವಾಬ್ದಾರಿ ಮರೆತಿದೆ. ನಿನ್ನೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಲು ಮುಖ್ಯಮಂತ್ರಿ ಹೊರಟರೆ, ಜನಕಲ್ಯಾಣ ಸಮಾವೇಶವೆಂದು ಹೆಸರು ಬದಲಿಸಿ ಕಾರ್ಯಕ್ರಮ ಮಾಡಿದ್ದಾರೆ. ಜನಕಲ್ಯಾಣ ಸಮಾವೇಶ ಇರಲಿ, ರಾಜ್ಯದ ಪರಿಸ್ಥಿತಿ ಏನೆಂದು ಮುಖ್ಯಮಂತ್ರಿ ಗಮನಿಸಬೇಕೆಂದು ಅವರು ಒತ್ತಾಯಿಸಿದರು.