Wednesday, April 16, 2025
Google search engine

Homeಅಪರಾಧಕಾನೂನುಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ: ಲೋಕಾದಿಂದ ಸುಮೋಟೋ ಕೇಸ್‌

ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ: ಲೋಕಾದಿಂದ ಸುಮೋಟೋ ಕೇಸ್‌

ಬೆಂಗಳೂರು: ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ 6 ಮಂದಿ ಬಾಣಂತಿಯರು ಮೃತ ಪಟ್ಟಿರುವ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಲೋಕಾಯುಕ್ತ ನ್ಯಾ| ಬಿ.ಎಸ್‌.ಪಾಟೀಲ್‌ ಲೋಕಾಯುಕ್ತ ಅಧಿಕಾರಿಗಳಿಗೆ ನಿರ್ದೇಶಿಸಿ ಆದೇಶಿಸಿದ್ದಾರೆ.

ಪಶ್ಚಿಮ ಬಂಗಾಲದ ಕಂಪೆನಿಯೊಂದು ಸರಬರಾಜು ಮಾಡಿದ್ದ ಕಳಪೆ ಗುಣಮಟ್ಟದ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣವನ್ನು ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಯರಿಗೆ ನೀಡಿದ ಪರಿಣಾಮ 6 ಸ್ತ್ರೀಯರು ಮೃತಪಟ್ಟಿದ್ದ ವಿಷಯವು ರಾಜ್ಯವ್ಯಾಪಿ ಸಂಚಲನ ಮೂಡಿಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ನ್ಯಾ| ಬಿ.ಎಸ್‌. ಪಾಟೀಲ್‌ ಲೋಕಾಯುಕ್ತ ಕಾಯ್ದೆಯಡಿಯಲ್ಲಿ ಅವರಿಗಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಲು ನಿರ್ದೇಶಿಸಿ ಆದೇಶಿಸಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆಯು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖೀಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸರಕಾರದ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಔಷಧ ನಿಯಂತ್ರಕರು ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ಬಳ್ಳಾರಿ ಸರಕಾರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ವಿರುದ್ಧ ಮಾತ್ರವಲ್ಲದೇ, ಎಲ್ಲೆಲ್ಲಿ ಲೋಪಗಳು ಕಂಡು ಬರುತ್ತವೆಯೋ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ಈ ಆದೇಶದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಯ ಭಾಗವಾಗಿ ಬಳ್ಳಾರಿ ಲೋಕಾಯುಕ್ತ ಸಂಸ್ಥೆಯ ಪೊಲೀಸ್‌ ಅಧೀಕ್ಷಕರು, ಪೊಲೀಸ್‌ ಉಪಾಧೀಕ್ಷಕರು ಹಾಗೂ ಪೊಲೀಸ್‌ ನಿರೀಕ್ಷಕರಿಗೆ ಪ್ರತ್ಯೇಕವಾಗಿ ಸರ್ಚ್‌ ವಾರಂಟ್‌ಗಳನ್ನು ನೀಡಿ ಘಟನೆ ನಡೆದ ಆಸ್ಪತ್ರೆ ಹಾಗೂ ಔಷಧ ಉಗ್ರಾಣವನ್ನು ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಔಷಧ ಸರಬರಾಜಿನ ಬಗ್ಗೆ ಮಾಹಿತಿಗೆ ಸೂಚನೆ:
ಈ ರೀತಿಯ ಘಟನೆಗಳು ಬೇರೆ ಯಾವುದಾದರೂ ಜಿಲ್ಲೆಯಲ್ಲಿಯೂ ಜರುಗಿರಬಹುದಾದ ಸಂಭವವಿರುವುದರಿಂದ, ಆ ಜಿಲ್ಲೆಗಳಲ್ಲಿ ಈ ಔಷಧ ಸರಬರಾಜು ಮಾಡಿರುವ ಬಗ್ಗೆ ಹಾಗೂ ಇದರಿಂದ ಆಗಬಹುದಾದ ದುರ್ಘ‌ಟನೆಯನ್ನು ತಡೆಯುವ ಸದುದ್ದೇಶದಿಂದ, ಆ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುವಂತೆ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೇಸ್‌ ಬೆನ್ನಲ್ಲೇ ಆಸ್ಪತ್ರೆ ಮೇಲೆ ಲೋಕಾಯುಕ್ತದಿಂದ‌ ದಾಳಿ
ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಾದ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಸ್ಪತ್ರೆ ಮೇಲೆ ಶನಿವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 3 ಪ್ರತ್ಯೇಕ ತಂಡಗಳಾಗಿ ಜಿಲ್ಲಾಸ್ಪತ್ರೆ, ಬಿಮ್ಸ್‌ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ. ಒಂದು ತಂಡ ಬಿಮ್ಸ್‌ ಆಸ್ಪತ್ರೆ, ಮತ್ತೂಂದು ತಂಡ ಜಿಲ್ಲಾಸ್ಪತ್ರೆ ಆವರಣದ ವೇರ್‌ಹೌಸ್‌ ಹಾಗೂ ಇನ್ನೊಂದು ತಂಡ ಆಸ್ಪತ್ರೆಯ ವಿವಿಧ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿತು. ಜಿಲ್ಲಾಸ್ಪತ್ರೆಗೆ ಸರ್ಚ್‌ ವಾರೆಂಟ್‌ನೊಂದಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿ ಮಹಮ್ಮದ್‌ ರಫೀಕ್‌, ಆಸ್ಪತ್ರೆಯ ಮಕ್ಕಳ ವಿಭಾಗ, ಹೆರಿಗೆ ವಿಭಾಗ, ಔಷಧ ವಿತರಣ ವಿಭಾಗಕ್ಕೆ ಭೇಟಿ ನೀಡಿ ಬಾಣಂತಿಯರಿಗೆ ರಿಯಾಕ್ಷನ್‌ ಆಗಿರುವ ಗ್ಲೂಕೋಸ್‌, ಸೀಜ್‌ ಆಗಿರುವ 280 ಐವಿ ಫ್ಲೂಯಿಡ್‌, ಆರ್‌ಎಲ್‌ ಬಾಟಲ್‌ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾಸ್ಪತ್ರೆ ಸರ್ಜನ್‌ ಡಾ| ಎನ್‌.ಬಸರೆಡ್ಡಿ ಹಾಗೂ ತಜ್ಞ ವೈದ್ಯರೊಂದಿಗೆ ಜಿಲ್ಲಾಸ್ಪತ್ರೆ ಆವರಣದ ವೇರ್‌ಹೌಸ್‌ಗೆ ತೆರಳಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಬಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ ಅ ಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 25ಕ್ಕೂ ಹೆಚ್ಚು ಲೋಕಾಯುಕ್ತ ಅ ಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಿರ್ದೇಶನಗಳ ವಿವರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಘಟನೆ ಸಂಬಂಧ ವಿವರವಾದ ವರದಿ, ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಜವಾಬ್ದಾರಿ ಗುರುತಿಸುವಂತೆ ಹಾಗೂ ದುರ್ಘ‌ಟನೆಗೆ ಕಾರಣವಾದ ಔಷಧವನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಮೇಲ್ಕಂಡ ಕಳಪೆ ಗುಣಮಟ್ಟದ ಔಷಧವನ್ನು ನಿಯಂತ್ರಿಸುವ ಸಲುವಾಗಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚನೆ.

ಈ ದುರ್ಘ‌ಟನೆಯಿಂದ ಮರಣ ಹೊಂದಿರುವ ಬಾಣಂತಿಯರ ಕುಟುಂಬ ವರ್ಗಕ್ಕೆ ನೀಡಿರುವ ಪರಿಹಾರದ ಮಾಹಿತಿಯನ್ನು ಸಲ್ಲಿಸುವಂತೆ ಸೂಚನೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಕಾರ್ಯ ವೈಖರಿಯನ್ನು ಪರಿಶೀಲಿಸಲು ಸೂಚನೆ.

ಬಾಣಂತಿಯರ ಸಾವಿಗೆ ಕಾರಣವಾದ ಸಾಕ್ಷಿ ಸಂಗ್ರಹದ ಸಲುವಾಗಿ ತತ್‌ಕ್ಷಣಕ್ಕೆ ಘಟನೆ ನಡೆದ ಆಸ್ಪತ್ರೆ ಹಾಗೂ ಔಷಧ ವಿತರಿಸುವ ಉಗ್ರಾಣವನ್ನು ತಪಾಸಣೆ ಕೈಗೊಳ್ಳಲು ಸರ್ಚ್‌ ವಾರಂಟ್‌ಗಳನ್ನು ನೀಡಿ, ತಪಾಸಣೆ ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular