ಉಡುಪಿ: ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣದ ಕುರಿತಂತೆ ಶನಿವಾರ (ನ.30) ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಾನು ಮತ್ತು ದಿನೇಶ್ ಗುಂಡೂರಾವ್ ಸತತ ಸಂಪರ್ಕದಲ್ಲಿದ್ದೇವೆ. ಭೇಟಿ ಕೊಟ್ಟಿಲ್ಲ ಎಂದರೆ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದೇವೆ ಎಂದಲ್ಲ. ಸರ್ಕಾರಕ್ಕೆ ಮತ್ತು ಮಂತ್ರಿಗಳಿಗೆ ಬಹಳ ಜವಾಬ್ದಾರಿಯಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಘಟನೆಯ ಬಗ್ಗೆ ಸಿಎಂ ನೇತೃತ್ವದಲ್ಲಿ ಅವರ ಅಧ್ಯಕ್ಷತೆಯಲ್ಲೇ ಸಭೆ ಕರೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಸ್ಥಳದಲ್ಲೇ ನಿರ್ಧಾರ ಕ್ರಮವಾಗುತ್ತದೆ ಎಂದರು.
ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು ಮೃತಪಟ್ಟಿದ್ದರು.
ಸಂಶಯವಿದ್ದರೆ ಸ್ಪಷ್ಟನೆ ಕೊಡುತ್ತೇವೆ
ನಕ್ಸಲ್ ವಿಕ್ರಂ ಗೌಡ ಎಂಕೌಂಟರ್ ಪ್ರಕರಣವಾಗಿ ಮಾತನಾಡಿದ ಉಸ್ತುವಾರಿ ಸಚಿವರು, ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಕ್ಸಲೀಯರನ್ನು ಕಟ್ಟಿ ಹಾಕಬೇಕೆನ್ನುವುದು ಸರಕಾರದ ನಿರ್ಧಾರ. ಕೂಂಬಿಂಗ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಕ್ರಂ ಗೌಡ ಬಳಿ ಕೂಡ ಶಸ್ತ್ರಾಸ್ತ್ರಗಳಿತ್ತು. ವಿಕ್ರಂ ಗೌಡ ಒಂದು ಬಾರಿ ಫೈರಿಂಗ್ ಮಾಡಿದ್ದಾರೆ. ಪ್ರತಿ ದಾಳಿ ಮಾಡದಿದ್ದರೆ ಪೊಲೀಸರ ಜೀವ ಹಾನಿ ಆಗುತ್ತಿತ್ತು. ನಕ್ಸಲ್ ವಾದವನ್ನು ಬೇರು ಸಮೇತ ಕಿತ್ತು ಹಾಕಬೇಕು ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಿಲುವು ಎಂದರು.
ಪರ ವಿರೋಧ ಚರ್ಚೆ ಎಲ್ಲಾ ಸಂದರ್ಭದಲ್ಲಿ ಇರುತ್ತದೆ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಸಂಶಯವಿದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ. ನ್ಯಾಯಾಂಗ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ. ನ್ಯಾಯಾಂಗ ತನಿಖೆಗೆ ಕೊಡುವುದು ಸರ್ಕಾರದ ತೀರ್ಮಾನ. ಈ ಬಗ್ಗೆ ಮುಖ್ಯಮಂತ್ರಿಗಳು ಗೃಹ ಸಚಿವರ ಬಳಿ ಮಾತನಾಡುತ್ತೇನೆ ಎಂದರು.
ಭಿನ್ನಮತವಿಲ್ಲ
ಹಾಸನದಲ್ಲಿ ಕಾಂಗ್ರೆಸ್ ಭಿನ್ನಮತೀಯರ ಸಮಾವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ. ಭಿನ್ನಮತ ಇರುವುದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಭಿನ್ನಮತದ ಬಗ್ಗೆ ಮಾಧ್ಯಮಗಳೇ ದಿನವೂ ತೋರಿಸುತ್ತಿವೆ. ನಮ್ಮಲ್ಲಿ ಭಿನ್ನಮತ ಇಲ್ಲ ಎನ್ನುವುದಕ್ಕೆ ಉಪಚುನಾವಣೆಯ ಫಲಿತಾಂಶವೇ ಉತ್ತರ ಎಂದರು.
ವಿಕಲಾಂಗ ಚೇತನ ಹಿರಿಯ ನಾಗರಿಕ ಇಲಾಖೆ ಅನುದಾನ ಕಡಿತ ವಿಚಾರದ ಬಗ್ಗೆ ಮಾತನಾಡಿ, ಇಲಾಖೆಗೆ 8 ಸಾವಿರ ಅರ್ಜಿಗಳು ಬಂದಿದೆ ಎನ್ನುವುದು ಸುಳ್ಳು. ಎರಡು ಮುಕ್ಕಾಲು ಸಾವಿರ ಅರ್ಜಿಗಳು ಬಂದಿವೆ. ಸಪ್ಲಿಮೆಂಟರಿ ಬಜೆಟ್ ನಲ್ಲಿ ಪ್ರಸ್ತಾವನೆ ಕಳುಹಿಸಿದ್ದೇವೆ. ಈಗಾಗಲೇ 10 ಕೋಟಿ ರೂಪಾಯಿಯನ್ನು ಯಥಾವತ್ತಾಗಿ ಬಿಡುಗಡೆ ಮಾಡಲಾಗಿದೆ. ನಮ್ಮ ಇಲಾಖೆ 32 ಸಾವಿರ ಕೋಟಿಗಿಂತ ಹೆಚ್ಚಿನ ಗಾತ್ರವನ್ನು ಹೊಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಕಲಾಂಗ ಚೇತನ ಯಾವುದೇ ಅನುದಾನವನ್ನು ನಾವು ಕಡಿತ ಮಾಡುವುದಿಲ್ಲ. 2700 ಅರ್ಜಿಗೂ ನಾವು ಸಹಾಯವನ್ನು ಮಾಡುತ್ತೇವೆ. ನಾವು ಅನುದಾನ ಕಟ್ ಮಾಡಿಲ್ಲ ಕಟ್ ಮಾಡುವುದಕ್ಕೂ ಬಿಡುವುದಿಲ್ಲ ಎಂದರು.
ರಾಜ್ಯದ ಕೆಲ ಅಂಗನವಾಡಿಗಳಲ್ಲಿ ಕಳಪೆ ಅಕ್ಕಿ ವಿತರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಅಂಗನವಾಡಿಗೆ 50 ವರ್ಷದ ಇತಿಹಾಸವಿದೆ. 70 ಸಾವಿರ ಅಂಗನವಾಡಿಯಲ್ಲಿ 35 ಲಕ್ಷ ಮಕ್ಕಳ ಪಾಲನೆ ಮಾಡುತ್ತೇವೆ. ಗದಗದಲ್ಲಿ ಸಮಸ್ಯೆಯಾಗಿರುವ ಅಂಗನವಾಡಿ ಹೆಸರು ಹೇಳಿ, ನಿಮ್ಮ ಮುಂದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.